ಕುಶಾಲನಗರ, ಏಪ್ರಿಲ್ 17: ಸೈನಿಕ ಶಾಲೆ ಕೊಡಗಿನ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿ, ಆಗ್ರಾ ವಾಯುಪಡೆ ನಿಲ್ದಾಣಕ್ಕೆ ವರ್ಗಾವಣೆಗೊಂಡಿರುವ ವಿಂಗ್ ಕಮಾಂಡರ್ ಪಿ. ಪ್ರಕಾಶ್ ರಾವ್ ಅವರಿಗೆ ಗೌರವಪೂರ್ವಕವಾಗಿ ವಿದಾಯ ಹೇಳಲು ಶಾಲೆಯ ಕುವೆಂಪು ವಿವಿದೊದ್ದೇಶ ಸಭಾಂಗಣದಲ್ಲಿ ವಿಶೇಷ ಸಭೆಯನ್ನು ಆಯೋಜಿಸಲಾಗಿತ್ತು.
ಕೆಡೆಟ್ ಧ್ರುವ ವಿ. ಭಾರದ್ವಾಜ್ ಮತ್ತು ಕೆಡೆಟ್ ತರುಣ್ ಪ್ರವೀಣ್ ಕಾರ್ಯಕ್ರಮದ ನಿರೂಪಣೆ ಮಾಡಿದರು. ಸಮಾರಂಭವು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆರಂಭವಾಯಿತು. ಇದರಲ್ಲಿ ‘ಮಯೂರ ನರ್ತನ’ (ನವಿಲು ನೃತ್ಯ) ಮತ್ತು ಸಾಂಪ್ರದಾಯಿಕ ಚಂಡೆವಾದನವಾದ ‘ಚಂಡೆಮದ್ದಳೆ’ ಪ್ರದರ್ಶನಗಳು ಗಮನಸೆಳೆದವು. ವಿಂಗ್ ಕಮಾಂಡರ್ ಪ್ರಕಾಶ್ ರಾವ್ ಅವರ ಅಧಿಕಾರಾವಧಿಯ ಸ್ಮರಣೀಯ ಕ್ಷಣಗಳು ಮತ್ತು ಶಾಲೆಯ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆಗಳನ್ನು ಬಿಂಬಿಸುವ ವೀಡಿಯೊ ತುಣುಕುಗಳನ್ನು ಪ್ರದರ್ಶಿಸಲಾಯಿತು.


ಶೈಕ್ಷಣಿಕ ಸಿಬ್ಬಂದಿಯ ಪರವಾಗಿ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕ ಶ್ರೀ ಮಣಿಕಂಠನ್ ಮತ್ತು ಆಡಳಿತ ಮಂಡಳಿಯ ಪರವಾಗಿ ಕಚೇರಿ ಅಧೀಕ್ಷಕ ಶ್ರೀ ರಿತಂ ಗಂಗೂಲಿ ಅವರು ಮಾತನಾಡುತ್ತಾ, ಅಧಿಕಾರಿಯೊಂದಿಗೆ ಕಳೆದ ದಿನಗಳ ಅನುಭವ ಮತ್ತು ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಉಪ ಪ್ರಾಂಶುಪಾಲರಾದ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ ಅವರು ಮಾತನಾಡುತ್ತಾ, ಪ್ರಕಾಶ್ ರಾವ್ ಅವರ ವೃತ್ತಿಪರತೆಯನ್ನು ವಿಶೇಷ ಪದಗಳಲ್ಲಿ ಸ್ಮರಿಸಿದರು ಹಾಗೂ ಅವರ ಅವಧಿಯಲ್ಲಿ ‘ವೇದವ್ಯಾಸ ವಿಭಾಗ'(ಶೈಕ್ಷಣಿಕ ಕಟ್ಟಡ) ಮರುರೂಪುಗೊಂಡು ಅನುಷ್ಠಾನಗೊಂಡಿದ್ದನ್ನು ವಿಶೇಷವಾಗಿ ಉಲ್ಲೇಖಿಸಿದರು.
ತಮ್ಮ ವಿದಾಯ ಭಾಷಣದಲ್ಲಿ ವಿಂಗ್ ಕಮಾಂಡರ್ ಪ್ರಕಾಶ್ ರಾವ್ ಅವರು ಈ ಕ್ಷಣವು ಅತ್ಯಂತ ಭಾವುಕವಾದುದು ಎಂದು ಬಣ್ಣಿಸಿದರು. ಸಂಸ್ಥೆಯನ್ನು ರೂಪಿಸುವಲ್ಲಿ ಸಾಂಘಿಕ ಪ್ರಯತ್ನ ಮತ್ತು ಸಮನ್ವಯದ ಮಹತ್ವವನ್ನು ಅವರು ಒತ್ತಿ ಹೇಳಿದರು. ಶಾಲೆಯ ಪ್ರಾಂಶುಪಾಲರು ಮತ್ತು ಶ್ರೀಮತಿ ದಿವ್ಯಾ ಸಿಂಗ್ ಅವರು ನೀಡಿದ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಅದೇ ರೀತಿಯ ಸಹಕಾರವನ್ನು ತಮ್ಮ ಉತ್ತರಾಧಿಕಾರಿಗೂ ನೀಡುವಂತೆ ಸಿಬ್ಬಂದಿಗೆ ಮನವಿ ಮಾಡಿದರು. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, “ಯಾವಾಗಲೂ ಕುತೂಹಲಭರಿತರಾಗಿರಿ ಹಾಗೆಯೇ ಪ್ರಶ್ನೆಗಳನ್ನು ಕೇಳುವುದನ್ನು ನಿಲ್ಲಿಸಬೇಡಿ; ಸಾಧನೆಗೆ ಆಕಾಶವೇ ಗಡಿ” ಎಂದು ಪ್ರೋತ್ಸಾಹಿಸಿದರು.
ನಿರ್ಗಮಿತ ಅಧಿಕಾರಿಯ ಸೇವೆಯನ್ನು ಗುರುತಿಸಿ ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್ ರವರು ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಇದಕ್ಕೆ ಪ್ರತಿಯಾಗಿ ನಿರ್ಗಮಿತ ಅಧಿಕಾರಿ ವಿಂಗ್ ಕಮಾಂಡರ್ ಪಿ ಪ್ರಕಾಶ್ ರವರೂ ಸಹ ಶಾಲೆಗೆ ಕೃತಜ್ಞತೆಯ ಸಂಕೇತವಾಗಿ ಸ್ಮರಣಿಕೆಯನ್ನು ನೀಡಿದರು. ಇದನ್ನು ಪ್ರಾಂಶುಪಾಲರು ಸ್ವೀಕರಿಸಿದರು.
ನಂತರ ಮಾತನಾಡಿದ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್ ರವರು “ಸಂಸ್ಥೆಯ ರಚನೆ ಮೊದಲೇ ಇತ್ತಾದರೂ, ಅದಕ್ಕೆ ಜೀವ ತುಂಬಿದವರು ವಿಂಗ್ ಕಮಾಂಡರ್ ಪ್ರಕಾಶ್ ರಾವ್” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಯುಪಿಎಸ್‌ಸಿ ಆಕಾಂಕ್ಷಿಗಳಿಗಾಗಿ ನಿರ್ಮಿಸಲಾದ ‘ಪ್ರಾಜೆಕ್ಟ್ ಶಿಖರ್’ ಸೌಲಭ್ಯವು ನಿರ್ಗಮಿತ ಅಧಿಕಾರಿಯ ಅವಧಿಯಲ್ಲಿ ಪೂರ್ಣಗೊಂಡಿದ್ದನ್ನು ಸ್ಮರಿಸಿದರು.
ವಿಂಗ್ ಕಮಾಂಡರ್ ಪಿ. ಪ್ರಕಾಶ್ ರಾವ್ ಅವರು ಮೇ 01, 2023 ರಂದು ಸೈನಿಕ ಶಾಲೆ ಕೊಡಗಿನ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಸಮಾರಂಭದ ನಂತರ ವಿದ್ಯಾರ್ಥಿಗಳ ಭೋಜನಾಲಯದಲ್ಲಿ ಶ್ರೀಯುತರ ಗೌರವಾರ್ಥವಾಗಿ ವಿಶೇಷ ಭೋಜನವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್, ಶ್ರೀಮತಿ ದಿವ್ಯಾ ಸಿಂಗ್, ಶ್ರೀಮತಿ ಶಾಲಿನಿ ರಾವ್, ಉಪ ಪ್ರಾಂಶುಪಾಲರಾದ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ, ಹಿರಿಯ ಶಿಕ್ಷಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿವರ್ಗದವರು, ಎನ್‌ಸಿಸಿ ಪಿಐ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.











