ವರದಿ : ಎಂ ರಾಜಿಬಾಯಿ, ನಂದಗಡ ವೀರಭೂಮಿ
ಖಾನಾಪುರ : ತಾಲೂಕಿನ ಐತಿಹಾಸಿಕ ಸ್ಥಳ ವೀರಭೂಮಿ ನಂದಗಡ ಗ್ರಾಮದಲ್ಲಿ ಸೋಮವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಸ್ತು ಸಂಗ್ರಹಾಲಯ (ವೀರಭೂಮಿ), ಸಮಾಧಿ ಬಳಿ ಕೆರೆಯ ದಡದಲ್ಲಿ ರಾಯಣ್ಣ ಪ್ರತಿಮೆ ಲೋಕಾರ್ಪಣೆ ಮಾಡಿ ವಿವಿಧ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದಾರಾಮಯ್ಯ ಭೂಮಿ ಪೂಜೆ ನೆರವೇರಿಸಿದರು.

ದೇಶಪ್ರೇಮಿ, ವೀರ ಸೇನಾನಿ ರಾಯಣ್ಣನ ಹುಟ್ಟೂರು ಸಂಗೊಳ್ಳಿ ಹಾಗೂ ನೇಣು ಹಾಕಿದಂತಹ ಸ್ಥಳ ನಂದಗಡದ ಸಮಗ್ರ ಅಭಿವೃದ್ಧಿ ಹಾಗೂ ನಿರ್ವಹಣೆಗಾಗಿ 2016ರಿಂದ ಇಲ್ಲಿಯವರೆಗೆ ರಾಯಣ್ಣ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಮೂಲಕ 320 ಕೋಟಿ ರೂ.ವೆಚ್ಚ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದರು.
ಯುವ ಸಮುದಾಯಕ್ಕೆ ರಾಯಣ್ಣ ಹಾಗೂ ಚನ್ನಮ್ಮನ ಇತಿಹಾಸ ತಿಳಿಸುವುದು ಹಾಗೂ ಸಂಗೊಳ್ಳಿ, ನಂದಗಡ ಅಂತಾರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿಸುವ ಉದ್ದೇಶ ದೊಂದಿಗೆ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗಿದೆ ಎಂದರು. ರಾಯಣ್ಣ ಹೆಸರಿನಲ್ಲಿ 2024ರಲ್ಲೇ ಸಂಗೊಳ್ಳಿಯಲ್ಲಿ ಶೌರ್ಯಭೂಮಿ ಹಾಗೂ ಸೈನಿಕ ಶಾಲೆ ಆರಂಭಿಸಲಾಗಿದೆ. 6 ರಿಂದ 9ನೇ ತರಗತಿಯಲ್ಲಿ 400 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪ್ರತಿಯೊಬ್ಬರೂ ದೇಶಪ್ರೇಮ ಬೆಳೆಸಿಕೊಂಡು ಸಂವಿಧಾನ ರಕ್ಷಸಬೇಕಿದೆ. ಶಿಕ್ಷಣದಿಂದ ಸಮಾನ ಅವಕಾಶ ಸಾಧ್ಯವಾಗಿದೆ. ಆದ್ದರಿಂದ ಶಿಕ್ಷಣ, ಸ್ವಾಭಿಮಾನ ಮತ್ತು ಜ್ಞಾನ ನಮ್ಮೆಲ್ಲರ ಅಭಿವೃದ್ಧಿಗೆ ಸಹಕಾರಿ. ದೇಶದ ಪ್ರಜಾಪ್ರಭುತ್ವ, ಸಂವಿಧಾನ ಉಳಿಸುವ ಕಾರ್ಯವಾಗಬೇಕು. ಜತೆಗೆ ಗುಲಾಮಗಿರಿತನ ಕಿತ್ತೆಸೆಯಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಮೊದಲು ವೇದಿಕೆಯಲ್ಲೇ ಖಾನಾಪುರ ಶಾಸಕ ವಿಠಲ ಹಲಗೇಕರ, ಕ್ಷೇತ್ರದ ಅಭಿವೃದ್ಧಿ ಕುರಿತು ಮರಾಠಿಯಲ್ಲಿ ಮಾತನಾಡುತ್ತಿದ್ದಂತೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದರು. ಕನ್ನಡದಲ್ಲಿಯೇ ಮಾತನಾಡುವಂತೆ ಒತ್ತಾಯಿಸಿ ಗದ್ದಲ ಎಬ್ಬಿಸಿದ್ದರು. ಮಧ್ಯಪ್ರವೇಶಿಸಿದ ಎಚ್.ಎಂ. ರೇವಣ್ಣ ಸಮಾಧಾನ ಪಡಿಸಿದರು. ಬಳಿಕ ಶಾಸಕರು ಕನ್ನಡದಲ್ಲೇ ಮಾತನಾಡಿ ಸಿಎಂಗೆ ಮನವಿ ಸಲ್ಲಿಸಿದರು.
ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಯವರು ಕರ್ನಾಟಕದಲ್ಲಿ ವಾಸಿಸುವ ಪ್ರತಿಯೊಬ್ಬರೂ ಕನ್ನಡದಲ್ಲಿ ಮಾತನಾಡಬೇಕು. ಅನ್ಯ ಭಾಷೆಯಲ್ಲಿ ಪ್ರಶ್ನೆ ಕೇಳುವವರಿಗೆ ಕನ್ನಡದಲ್ಲೇ ಉತ್ತರಿಸುವ ಮನೋ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಉದ್ಯೋಗ, ವ್ಯಾಪಾರ ಹುಡುಕಿಕೊಂಡು ಬರುವವರು, ಉದ್ಯಮಿಗಳು ಕನ್ನಡ ಭಾಷೆ ಕಲಿತು ವ್ಯವಹರಿಸುವುದು ಕಡ್ಡಾಯ ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಸಿದರು.
ನಂದಗಡದಲ್ಲಿನ ಮ್ಯೂಸಿಯಂ ವೀರಭೂಮಿಯಲ್ಲಿ ವಸ್ತು ಸಂಗ್ರಹಾಲಯ, ರಾಯಣ್ಣನ ಯುದ್ಧ ತರಬೇತಿ, ಕುಲಕರ್ಣಿ ಮನೆ, ಗುಹೆ, ಸುರಪುರ ಅರಮನೆ, ರಾಯಣ್ಣ ಜೀವನ ಸಾಧನೆ ತೋರಿಸುವ ಹೊಲೊಗ್ರಾಮ್ ಥೇಟರ್, ಮೂರ್ತಿಗಳು, ಧ್ವನಿವರ್ಧಕ, ಗುಹೆ, ಕವಳ ಗುಡ್ಡ, ಶ್ರೀ ಡೈಮೆನ್ಯನ್ ಚಿತ್ರಮಂದಿರ, ಘಟನಾ ಚಿತ್ರಣದ ಮೂರ್ತಿ ಸೇರಿ ಸಂಗೊಳ್ಳಿ ರಾಯಣ್ಣ ಅವರ ಜೀವನ ಗಾಥೆ, ಶೌರ್ಯದ ಸಾಹಸಗಾಥೆಗಳು ನಂದಗಡದಲ್ಲಿ ಮೂರ್ತಿಗಳು ಯುದ್ಧ ಸನ್ನಿವೇಶ ಕಣ್ಮನ ಸೆಳೆಯುತ್ತಿದೆ.
ಸಂಗೊಳ್ಳಿ ರಾಯಣ್ಣ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ರಣಕಹಳೆ ಮೊಳಗಿಸಿದ ಇತಿಹಾಸ ಮೆಲುಕು ಹಾಕುವ ಉದ್ದೇಶದೊಂದಿಗೆ ಸಂಗೊಳ್ಳಿ ಹಾಗೂ ನಂದಗಡ ಗ್ರಾಮದಲ್ಲಿ ವಸ್ತು ಸಂಗ್ರಹಾಲಯ ಸ್ಥಾಪಿಸುವ ಕಾರ್ಯವನ್ನು ಸರ್ಕಾರ ಮಾಡಿದೆ.
ಕಾಗಿನೆಲೆ ಕನಕ ಗುರುಪೀಠದ ರೇವಣಸಿದ್ದೇಶ್ವರ ಸಿಂಹಾಸನಾಧೀಶ್ವರ ಡಾ. ನಿರಂಜನಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ರಾಯಣ್ಣ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ, ಶಾಸಕರಾದ ಮಹಾಂತೇಶ ಕೌಜಲಗಿ, ಶಾಸಕ ವಿಠಲ ಹಲಗೇಕರ, ಶಾಸಕ ವಿಶ್ವಾಸ ವೈದ್ಯ, ಶಾಸಕ ಅಶೋಕ ಪಟ್ಟಣ, ಶಾಸಕ ಬಾಬಾಸಾಹೇಬ ಪಾಟೀಲ, ಎಂಎಲ್‌ಸಿ ಚನ್ನರಾಜ ಹಟ್ಟಿಹೊಳ್ಳಿ, ಆರ್ ಶಾಲನಿ ಮಾಜಿ ಶಾಸಕಿ ಡಾ ಅಂಜಲಿ ನಿಂಬಾಳಕರ ಬಸವರಾಜ ಕಮತಗಿ, ಸಂಗೊಳ್ಳಿ ರಾಯಣ್ಣಾ ಪ್ರಾಧಿಕಾರದ ಸರ್ವರೂ ಇತರರಿದ್ದರು.
ಬಸವರಾಜ ಕುಪ್ಸಗೌಡರ ಕಾರ್ಯಕ್ರಮ ನಿರುಪಿಸಿದರು ಮುಖ್ಯ ವೇದಿಕೆ, ದೀಪಂಲಾಕಾರ ಮುರಗೊಡ ಪೆಂಡಾಲ ಭವ್ಯ ಕನ್ನಡದ ಅನುಭವ ಪರಂಪರೆಯ ಮಂಟಪ ಕಣ್ಮನ ಸೆಳೆಯಿತು.











