ಕುಶಾಲನಗರ : ಕೂಡಿಗೆ, ಜ 26: ಸೈನಿಕ ಶಾಲೆ ಕೊಡಗಿನಲ್ಲಿ 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ಉತ್ಸಾಹ ಹೆಮ್ಮೆ ಮತ್ತು ದೇಶಭಕ್ತಿಯ ಭಾವನೆಯೊಂದಿಗೆ ಶಾಲೆಯ ಜನರಲ್ ತಿಮ್ಮಯ್ಯ ಪೆರೇಡ್ ಮೈದಾನದಲ್ಲಿ ಆಚರಿಸಲಾಯಿತು. ಈ ಸಮಾರಂಭವು ಶಾಲೆಯ ಸಮೃದ್ಧ ಸೈನಿಕ ಪರಂಪರೆ, ರಾಷ್ಟ್ರ ಹಾಗೂ ಅದರ ಸಂವಿಧಾನದ ಮೇಲಿನ ಅಪಾರ ಗೌರವವನ್ನು ಪ್ರತಿಬಿಂಬಿಸುವಂತಿತ್ತು.

ಕಾರ್ಯಕ್ರಮದ ಮೊದಲಿಗೆ ಮುಖ್ಯ ಅತಿಥಿಗಳನ್ನು ಶಾಲೆಯ ಅಶ್ವದಳವು ಸ್ವಾಗತಿಸಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರಭಾರೆ ಪ್ರಾಂಶುಪಾರಾದ ವಿಂಗ್ ಕಮಾಂಡರ್ ಪಿ ಪ್ರಕಾಶ್ ರಾವ್ ರವರು ಹಾಗೂ ಉಪಪ್ರಾಂಶುಪಾಲರಾದ ವಿಂಗ್ ಕಮಾಂಡರ್ ಮೊಹಮ್ಮದ್ ಶಾಲೆಯಲ್ಲಿನ ಯುದ್ಧ ಸ್ಮಾರಕಕ್ಕೆ ಪುಷ್ಪಗುಚ್ಛವನ್ನು ಅರ್ಪಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಮುಖ್ಯ ಅತಿಥಿಗಳು ಧ್ವಜಾರೋಹಣವನ್ನು ನೆರವೇರಿಸುವುದರೊಂದಿಗೆ ನೆರೆದಿದ್ದ ಸಭಿಕರು ರಾಷ್ಟ್ರಗೀತೆಯ ಗಾಯನ ಮಾಡಿದರು. ಪಥಸಂಚಲನದ ನಾಯಕ ಕೆಡೆಟ್ ಪ್ರಿಯಾಂಶು ಯಾದವ್ ಅವರು ಮುಖ್ಯ ಅತಿಥಿಗೆ ಗೌರವ ವಂದನೆ ಸಲ್ಲಿಸಿದರು. ಪಥಸಂಚಲನದ ಸಮೀಕ್ಷಾ ಕ್ರಮದ ನಂತರ ಶಾಲೆಯ ಸಂಗೀತ ಕ್ಲಬ್ ಸದಸ್ಯರಿಂದ ಗಾಯನ ಮಾಡಲಾದ ‘ವಂದೇ ಮಾತರಂ’ ಗೀತೆಯು ಸಭಿಕರ ಮನಸೆಳೆಯಿತು.
ಈ ಸಂದರ್ಭದಲ್ಲಿ ಇಂಗ್ಲಿಷ್ ಭಾಷಾ ವಿಭಾಗದ ಪಿಜಿಟಿ ಶಿಕ್ಷಕಿ ಶ್ರೀಮತಿ ಶ್ರೀಲೇಖಾ ವಿ ಎಸ್ ಹಾಗೂ ಸಾಮಾನ್ಯ ನೌಕರ ವರ್ಗದ ಶ್ರೀ ಮುರಳಿ ಎಸ್ ಜಿ ಅವರಿಗೆ ಶಾಲೆಯಲ್ಲಿ ಸಲ್ಲಿಸಿದ ಅನುಪಮ ಸೇವೆ ಮತ್ತು ಸಮರ್ಪಣೆಯ ಪ್ರತೀಕವಾಗಿ ಎಲ್ ಬಿ ಎ ಅಧ್ಯಕ್ಷರ ಪ್ರಶಂಸನಾ ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಯಿತು. ಇದರೊಂದಿಗೆ ಸಾಮಾನ್ಯ ನೌಕರರ ನಿಷ್ಠಾವಂತ ಸೇವೆಯ ಪ್ರಶಂಸೆಯ ಸಂಕೇತವಾಗಿ, ಮುಖ್ಯ ಅತಿಥಿಗಳು ನೀಡಿದರ ಸಿಹಿತಿಂಡಿಯನ್ನು ಶ್ರೀ ಶರಣಪ್ಪರವರು, ಎಲ್ಲಾ ಸಾಮಾನ್ಯ ನೌಕರರ ಪರವಾಗಿ ಸ್ವೀಕರಿಸಿದರು.
ವಿದ್ಯಾರ್ಥಿಗಳನ್ನು ಹಾಗೂ ಸಿಬ್ಬಂದಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿಗಳು ಭಾರತದ ಸಂವಿಧಾನ ರೂಪಿಸುವಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಅಮೂಲ್ಯ ಕೊಡುಗೆಯನ್ನು ಸ್ಮರಿಸಿದರು. ರಕ್ಷಣಾ ಸಿಬ್ಬಂದಿ ದೇಶದ ರಕ್ಷಣೆ ಹಾಗೂ ಸಮಗ್ರತೆಯಲ್ಲಿ ತೋರಿಸುವ ನಿಸ್ವಾರ್ಥ ಸೇವಾಭಾವನೆಯನ್ನು ಉದಾಹರಿಸಿ, ವೈಯಕ್ತಿಕ ವಿಶ್ರಾಂತಿಗಿಂತ ದೇಶಸೇವೆಯನ್ನು ತಮ್ಮ ಜೀವನದ ಪರಮೋಚ್ಛಗುರಿಯನ್ನಾಗಿ ಹೊಂದಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಹಾಗೆಯೇ ಪ್ರಶಸ್ತಿ ಸ್ವೀರಿಸಿದ ಸಿಬ್ಬಂದಿವರ್ಗದವರಿಗೆ ಅಭಿನಂದನೆ ಸಲ್ಲಿಸಿ, ಸರ್ವರಿಗೂ ಗಣರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿದರು.
ಇದರೊಂದಿಗೆ ಸೈನಿಕ ಶಾಲೆ ಕೊಡಗಿನ ವಿದ್ಯಾರ್ಥಿಗಳ ಪಥಸಂಚಲನ ತಂಡವು ಮಡಿಕೇರಿಯಲ್ಲಿ ನಡೆದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಅತ್ಯುತ್ತಮ ಪಥಸಂಚಲನ ಪ್ರದರ್ಶನ ನೀಡಿದಕ್ಕಾಗಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಿಂದ ಗಣರಾಜ್ಯೋತ್ಸವ ಪರೇಡ್ ಶ್ರೇಷ್ಠತಾ ಪಾರಿತೋಷಕವನ್ನು ಸ್ವೀಕರಿಸಿ ಶಾಲೆಯ ಗೌರವವನ್ನು ಇಮ್ಮಡಿಗೊಳಿಸಿದರು.
ಪ್ರಸ್ತುತ ಸಮಾರಂಭದಲ್ಲಿ ಶಾಲೆಯ ಪ್ರಥಮ ಮಹಿಳೆ ಶ್ರೀಮತಿ ದಿವ್ಯಾ ಸಿಂಗ್, ಶ್ರೀಮತಿ ಶಾಲಿನಿ ರಾವ್, ಶಾಲಾ ವೈದ್ಯಾಧಿಕಾರಿ, ಹಿರಿಯ ಶಿಕ್ಷಕರು, ಬೋಧಕ-ಬೋಧಕೇತರ ಸಿಬ್ಬಂದಿವರ್ಗ, ಎನ್‌ಸಿಸಿ ಸಿಬ್ಬಂದಿವರ್ಗ, ದೈಹಿಕ ಶಿಕ್ಷಕರು ಹಾಗೂ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಹಾಜರಿದ್ದರು.
ವರದಿ : ಪ್ರಸಾದ್ ಎಚ್ಎಮ್, ಸೈನಿಕ ಶಾಲೆ ಕೊಡಗು ನ್ಯೂಸ್ ಡೆಸ್ಕ್











