ಕುಶಾಲನಗರ ಏ 8: ಸೈನಿಕ ಶಾಲೆ ಕೊಡಗಿನಲ್ಲಿ ಮಾರ್ಚ್ 27 ರಿಂದ 29 ರವರೆಗೆ ಆಯೋಜಿಸಲಾಗಿದ್ದ ‘ಕೊಡಗಿಯನ್ ಫುಟ್ಬಾಲ್ ಟೂರ್ನಮೆಂಟ್ 2026’ ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಈ ಕ್ರೀಡಾಕೂಟವು ಯುವ ವಿದ್ಯಾರ್ಥಿಗಳಲ್ಲಿ ಅದ್ಭುತ ಕ್ರೀಡಾ ಮನೋಭಾವ ಮತ್ತು ಉತ್ಸಾಹಕ್ಕೆ ಸಾಕ್ಷಿಯಾಯಿತು.
ಈ ಪಂದ್ಯಾವಳಿಯಲ್ಲಿ ಸೈನಿಕ ಶಾಲೆ ಕೊಡಗು (ಜೂನಿಯರ್ ಮತ್ತು ಸಬ್-ಜೂನಿಯರ್ ವಿಭಾಗ), ಬೆಂಗಳೂರಿನ ವಾಯುಪಡೆ ಶಾಲೆ ಜಾಲಹಳ್ಳಿ, ವಾಯುಪಡೆ ಶಾಲೆ ಹೆಬ್ಬಾಳ ಮತ್ತು ರಾಷ್ಟ್ರೀಯ ಮಿಲಿಟರಿ ಶಾಲೆ ತಂಡಗಳು ಭಾಗವಹಿಸಿದ್ದವು. ಉದಯೋನ್ಮುಖ ಫುಟ್ಬಾಲ್ ಆಟಗಾರರಿಗೆ ತಮ್ಮ ಕೌಶಲ್ಯ, ಸಾಂಘಿಕ ಹೋರಾಟ ಮತ್ತು ಶಿಸ್ತನ್ನು ಪ್ರದರ್ಶಿಸಲು ಈ ಕ್ರೀಡಾ ಕೂಟವು ಉತ್ತಮ ವೇದಿಕೆಯನ್ನು ಕಲ್ಪಿಸಿಕೊಟ್ಟಿತ್ತು.
ಕ್ರೀಡಾಕೂಟದ ಆರಂಭದಲ್ಲಿ ನಡೆದ ಆಕರ್ಷಕ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸೈನಿಕ ಶಾಲೆ ಕೊಡಗಿನ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್ ರವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ, ಕ್ರೀಡಾ ಮನೋಭಾವ ಮತ್ತು ಪ್ರಾಮಾಣಿಕ ಆಟದ ಮೌಲ್ಯಗಳನ್ನು ಎತ್ತಿಹಿಡಿಯಲು ಕರೆ ನೀಡಿದರು.

ಪ್ರಸ್ತುತ ಕ್ರೀಡಾಕೂಟದಲ್ಲಿ ಹಲವಾರು ರೋಚಕ ಪಂದ್ಯಗಳ ನಂತರ ಸೈನಿಕ ಶಾಲೆ ಕೊಡಗು ಜೂನಿಯರ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ವಾಯುಪಡೆ ಶಾಲೆ ಹೆಬ್ಬಾಳ ತಂಡವು ರನ್ನರ್-ಅಪ್ ಸ್ಥಾನವನ್ನು ಪಡೆದುಕೊಂಡಿತು.
ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗ ಸೈನಿಕ ಶಾಲೆ ಕೊಡಗಿನ ಆಡಳಿತಾಧಿಕಾರಿ ವಿಂಗ್ ಕಮಾಂಡರ್ ಪಿ. ಪ್ರಕಾಶ್ ರಾವ್ ಆಗಮಿಸಿ ವಿಜೇತರಿಗೆ ಬಹುಮಾನ ವಿತರಿಸಿದರು. ವಿಜೇತ ತಂಡಕ್ಕೆ ಪಾರತೋಷಕ, ಚಿನ್ನದ ಪದಕ ಹಾಗೂ ಪ್ರಮಾಣಪತ್ರಗಳನ್ನು ನೀಡಲಾಯಿತು. ರನ್ನರ್-ಅಪ್ ತಂಡಕ್ಕೆ ಪಾರಿತೋಷಕ ಹಾಗೂ ಬೆಳ್ಳಿ ಪದಕಗಳನ್ನು ವಿತರಿಸಲಾಯಿತು. ಕ್ರೀಡಾಕೂಟದಲ್ಲಿ ಸೈನಿಕ ಶಾಲೆ ಕೊಡಗಿನ ಕೆಡೆಟ್ ಪ್ರಜ್ವಲ್ ಎಸ್ ಅತ್ಯುತ್ತಮ ಆಟಗಾರನನ್ನಾಗಿ ಹಾಗೂ ಉತ್ತಮ ಗೋಲ್ ಕೀಪರ್ ಆಗಿ ಆರ್ಯ ಚಿರಾಯ್ ಗೌಡರನ್ನು ಗುರುತಿಸಿ ಗೌರವಿಸಲಾಯಿತು. ಈ ಕ್ರೀಡಾಕೂಟಕ್ಕೆ ಕೂಡಿಗೆಯ ಕೆನರಾ ಬ್ಯಾಂಕ್ ಪ್ರಾಯೋಜಕತ್ವ ನೀಡಿ ಸಹಕರಿಸಿತ್ತು.
ಈ ಸಂದರ್ಭದಲ್ಲಿ ಶಾಲೆಯ ಉಪಪ್ರಾಂಶುಪಾಲರಾದ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ, ಹಿರಿಯ ಶಿಕ್ಷಕರು, ವಿವಿಧ ಶಾಲೆಗಳಿಂದ ಆಗಮಿಸಿದ್ದ ಸಿಬ್ಬಂದಿಗಳು, ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕ್ರೀಡಾಕೂಟವು ವಿದ್ಯಾರ್ಥಿಗಳಲ್ಲಿ ಸೌಹಾರ್ದತೆ ಮತ್ತು ಶಿಸ್ತಿನ ಭಾವನೆಯನ್ನು ಮೂಡಿಸುವ ಮೂಲಕ ಯಶಸ್ವಿಯಾಗಿ ತೆರೆಕಂಡಿತು.











