ಸೈನಿಕ ಶಾಲೆ ಕೊಡಗಿನಲ್ಲಿ ದಕ್ಷಿಣ ವಲಯದ ಅಂತರ ಗುಂಪು ಫುಟ್‌ಬಾಲ್ ಪಂದ್ಯಾವಳಿ (ಗುಂಪು-ಹೆಚ್)ಯ ಉದ್ಘಾಟನಾ ಸಮಾರಂಭ

ಕುಶಾಲನಗರ. ಏ 20: ಸೈನಿಕ ಶಾಲೆ ಕೊಡಗಿನಲ್ಲಿ 2026–27ನೇ ಸಾಲಿನ ದಕ್ಷಿಣ ವಲಯದ ಅಂತರ ಗುಂಪು ಫುಟ್‌ಬಾಲ್ ಪಂದ್ಯಾವಳಿಯ (ಗುಂಪು-ಹೆಚ್) ಉದ್ಘಾಟನಾ ಸಮಾರಂಭವು 20ನೇ ಏಪ್ರಿಲ್ 2026 ರಂದು ನಡೆಯಿತು. ಈ ಪಂದ್ಯಾವಳಿಯು ಸೈನಿಕ ಶಾಲೆಗಳು ಮತ್ತು ಹೊಸ ಸೈನಿಕ ಶಾಲೆಗಳ ನಡುವಿನ ಪ್ರತಿಷ್ಠಿತ ಅಂತರ-ಶಾಲಾ ಕ್ರೀಡಾ ಸ್ಪರ್ಧೆಗೆ ಮುನ್ನುಡಿ ಬರೆಯಿತು.

ಪ್ರಸ್ತುತ ಸಮಾರಂಭಕ್ಕೆ ಸೈನಿಕ ಶಾಲೆ ಕೊಡಗಿನ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಮೊದಲಿಗೆ ಕೆಡೆಟ್ ಭಾಗ್ಯಶ್ರೀ ಅವರು ಸ್ವಾಗತ ಭಾಷಣ ಮಾಡಿ, ನೆರೆದಿದ್ದ ಎಲ್ಲಾ ಗಣ್ಯರಿಗೆ ಮತ್ತು ಭಾಗವಹಿರುವ ತಂಡಗಳಿಗೆ ಹೃತ್ಪೂರ್ವಕ ಸ್ವಾಗತ ಕೋರಿದರು. ನಂತರ ಆಗಮಿಸಿದ್ದ ಸ್ಪರ್ಧಾಳುಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಇದು ಸ್ಪರ್ಧಾಳುಗಳಲ್ಲಿನ ಶಿಸ್ತು ಮತ್ತು ಏಕತೆಯನ್ನು ಪ್ರದರ್ಶಿಸಿತು.

ಕೆಡೆಟ್ ಸೋಹಮ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು, ಭಾಗವಹಿದ ಕ್ರೀಡಾಪಟುಗಳು ಕ್ರೀಡಾ ಮನೋಭಾವ ಮತ್ತು ನ್ಯಾಯಸಮ್ಮತ ಆಟದ ನಿಯಮಗಳನ್ನು ಎತ್ತಿಹಿಡಿಯುವುದಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಆತಿಥೇಯ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ರೋಮಾಂಚನಕಾರಿಯಾದ ‘ಚಂಡೆ-ಮದ್ದಳೆ’ ಪ್ರದರ್ಶನ ನಡೆಯಿತು, ಇದು ಯುವ ಕಲಾವಿದರ ಉತ್ಸಾಹ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವಂತಿತ್ತು.

ಮುಖ್ಯ ಅತಿಥಿಗಳಾಗಿ ಗಮಿಸಿದ್ದ ಶಾಲೆ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್ ರವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಸೈನಿಕ ಶಾಲೆ ಅಮರಾವತಿನಗರ (ತಮಿಳುನಾಡು), ಸೈನಿಕ ಶಾಲೆ ಕಲಿಕಿರಿ(ಆಂಧ್ರಪ್ರದೇಶ), ಸೈನಿಕ ಶಾಲೆ ಕಝಕೂಟಂ (ಕೇರಳ), ಮಧುರೈನ ವಲ್ಲಭ ವಿದ್ಯಾಲಯ (ತಮಿಳುನಾಡು), ಮತ್ತು ಟ್ಯೂಟಿಕೋರಿನ್ ನ ವಿಕಾಸ ಶಾಲೆ (ತಮಿಳುನಾಡು) ತಂಡಗಳನ್ನು ಹಾಗೂ ಆತಿಥೇಯ ಶಾಲೆಯ ತಂಡವನ್ನು ಸ್ವಾಗತಿಸಿದರು. ತಂಡದ ಕೆಲಸ, ನಾಯಕತ್ವ ಮತ್ತು ಸ್ಥಿತಿಸ್ಥಾಪಕತ್ವವನ್ನು ಬೆಳೆಸುವಲ್ಲಿ ಕ್ರೀಡೆಗಳ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು.

ಫುಟ್‌ಬಾಲ್ ಕ್ರೀಡೆಯು ಸಮನ್ವಯತೆ, ನಂಬಿಕೆ ಮತ್ತು ಸಾಂಘಿಕ ಹೋರಾಟದ ಗುಣಗಳನ್ನು ಕಲಿಸುತ್ತದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಪ್ರಾಮಾಣಿಕತೆಯಿಂದ ಸ್ಪರ್ಧಿಸಲು ಮತ್ತು ಕ್ರೀಡಾ ಮನೋಭಾವದ ಅತ್ಯುನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಕರೆ ನೀಡಿದರು. ವಿದ್ಯಾರ್ಥಿಗಳಿಂದ ಪ್ರದರ್ಶಿಸಲ್ಪಟ್ಟ ಪಥಸಂಚಲನ ಮತ್ತು ಸಾಂಸ್ಕೃತಿಕ ಪ್ರದರ್ಶನಗಳನ್ನು ಶ್ಲಾಘಿಸಿದ ಅವರು, ಸಂಘಟನಾ ತಂಡದ ಪ್ರಯತ್ನಗಳನ್ನು ಪ್ರಶಂಸಿಸಿದರು. ಅಂತಿಮವಾಗಿ ಕ್ರೀಡಾಕೂಟವು ಅಧಿಕೃತವಾಗಿ ಪ್ರಾರಂಭಗೊಂಡಿದೆ ಎಂದು ಘೋಷಿಸಿದರು.
ಕಾರ್ಯಕ್ರಮದಲ್ಲಿ ಕೆಡೆಟ್ ತ್ರಿನಭ್ ವಂದನಾರ್ಪಣೆ ನಿರ್ವಹಿಸಿದರೆ, ಕೆಡೆಟ್ ಧ್ರುವ್ ಮತ್ತು ಕೆಡೆಟ್ ವಿಜಯ್ ನಿರೂಪಿಸಿದರು.

ಪ್ರಸ್ತುತ ಪಂದ್ಯಾವಳಿಯು 15 ವರ್ಷದೊಳಗಿನ ಬಾಲಕರು, 17 ವರ್ಷದೊಳಗಿನ ಬಾಲಕರು ಮತ್ತು 17 ವರ್ಷದೊಳಗಿ ಬಾಲಕಿಯರು ಹೀಗೆ ಮೂರು ವಿಭಾಗಗಳಲ್ಲಿ ಸ್ಪರ್ಧೆಯು ಒಳಗೊಂಡಿರುತ್ತದೆ. ಮಧುರೈಯ ವಲ್ಲಭ ವಿದ್ಯಾಲಯವು 15 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಭಾಗವಹಿಸುತ್ತಿದ್ದರೆ, ಟ್ಯೂಟಿಕೋರಿನ್‌ನ ವಿಕಾಸ ಶಾಲೆಯು ವರ್ಷದೊಳಗಿನ ಬಾಲಕರು, 17 ವರ್ಷದೊಳಗಿನ ಬಾಲಕರ ವಿಭಾಗಗಳಲ್ಲಿ ಸ್ಪರ್ಧಿಸುತ್ತಿದೆ.
ಈ ಸಮಾರಂಭದಲ್ಲಿ ಶ್ರೀಮತಿ ದಿವ್ಯಾ ಸಿಂಗ್, ಆಡಳಿತಾಧಿಕಾರಿಗಳಾದ ವಿಂಗ್ ಕಮಾಂಡರ್ ಪಿ ಪ್ರಕಾಶ್ ರಾವ್ ಉಪಪ್ರಾಂಶುಪಾಲರಾದ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ, ಹಿರಿಯ ಶಿಕ್ಷಕರು, ಶಾಲಾ ವೈದ್ಯಾಧಿಕಾರಿಗಳು, ವಿವಿಧ ತಂಡಗಳ ಮೇಲ್ವಿಚಾರಕರು, ವ್ಯವಸ್ಥಾಪಕರು, ತರಬೇತುದಾರರು, ತೀರ್ಪುಗಾರರು, ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು, ಎನ್‌ಸಿಸಿ ಪಿಐ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Comment

error: Content is protected !!