🌿 ಹಿರೇನಂದಿಹಳ್ಳಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ವಿಜಯದ ಸಂಕೇತವಾದ ಬನ್ನಿ ಮುಡಿಯುವ ಸಂಭ್ರಮ ಸಂಪ್ರದಾಯಕ ಪಲ್ಲಕ್ಕಿ ಉತ್ಸವ

ಚನ್ನಮ್ಮನ ಕಿತ್ತೂರು: ತಾಲ್ಲೂಕಿನ ಹಿರೇನಂದಿಹಳ್ಳಿ ಗ್ರಾಮದ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ವಿಜಯದಶಮಿ ಅಂಗವಾಗಿ ಬನ್ನಿ ಮುಡಿಯುವ  ಕಾರ್ಯಕ್ರಮವು ಭಕ್ತಿಭಾವದಿಂದ ನಡೆಯಿತು. ಗ್ರಾಮದ ಆರಾಧ್ಯ ದೇವತೆಯಾದ ಶ್ರೀ ದುರ್ಗಾದೇವಿಯ ಪುರಾಣ ಶ್ರೀ ಪ್ರಣವಾನಂದ ಸ್ವಾಮಿಗಳ ನೇತೃತ್ವದಲ್ಲಿ ಒಂಬತ್ತು ದಿನಗಳ ಕಾಲ ಶ್ರೀ ದುರ್ಗಾದೇವಿ ಪುರಾಣ ಪ್ರವಚನ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಪ್ರತಿದಿನ ದೇವಿಗೆ ವಿಶೇಷ ಪೂಜೆ ಸಲ್ಲಿಸುವುದರ ಜೊತೆಗೆ ಭಕ್ತಾದಿಗಳಿಗೆ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡು ದೇವಿಯ ದರ್ಶನ ಪಡೆದು ಧಾರ್ಮಿಕ ಕಾರ್ಯಕ್ರಮಗಳ ಪ್ರಯೋಜನ ಪಡೆದರು.

ಆಯುಧ ಪೂಜೆ, ವಿಶೇಷ ಪ್ರಾರ್ಥನೆ ಹಾಗೂ ಪಲ್ಲಕ್ಕಿ ಉತ್ಸವ ನವರಾತ್ರಿಯ ಕೊನೆಯ ದಿನ ಮುಂಜಾನೆ ಸಂಪ್ರದಾಯದಂತೆ ಆಯುಧ ಪೂಜೆಯನ್ನು ನೆರವೇರಿಸಲಾಯಿತು. ಸಂಜೆ ಶ್ರೀ ದುರ್ಗಾದೇವಿಗೆ ವಿಶೇಷ ಪೂಜೆ ಸಲ್ಲಿಸಿ, ನಾಡಿನ ಸುಖ, ಶಾಂತಿ, ಸಮೃದ್ಧಿ ಹಾಗೂ ಜನರ ಒಳಿತಿಗಾಗಿ ಪ್ರಾರ್ಥಿಸಲಾಯಿತು. ಬಳಿಕ ಭಕ್ತಿಪೂರ್ವಕವಾಗಿ ದೇವಿಯ ಪಲ್ಲಕ್ಕಿ ಉತ್ಸವ ನಡೆಯಿತು.

ವಿಜಯದಶಮಿಯ ವಿಶೇಷ ಸಂದರ್ಭದಲ್ಲಿ ಗ್ರಾಮದ ಆರಾಧ್ಯ ದೇವತೆಯಾದ ಶ್ರೀ ದುರ್ಗಾದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಭಕ್ತರು ದೇವಿಯ ಪಲ್ಲಕ್ಕಿಯನ್ನು ಹೊತ್ತು ಸಂಗೀತ ವಾದ್ಯಗಳು, ಭಜನೆ, ಶಂಖನಾದ, ಘಂಟಾನಾದ ಹಾಗೂ ದೇವಿಯ ಜೈಕಾರಗಳೊಂದಿಗೆ ಬನ್ನಿ ಮರದ ಬಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ನಂತರ ಗ್ರಾಮದ ಪ್ರಮುಖ ರಸ್ತೆಯ ಮೂಲಕ ದೇವಿಯ ಪಲ್ಲಕ್ಕಿ ಉತ್ಸವ ಸಾಗಿತು. ಮಾರ್ಗದುದ್ದಕ್ಕೂ ಮಂಗಳೆಯರು ಆರತಿ ಬೆಳಗಿ ದೇವಿಯನ್ನು ಭಕ್ತಿಯಿಂದ ಬರಮಾಡಿಕೊಂಡರು. ಗ್ರಾಮಸ್ಥರು ದೇವಿಯ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು. ಬಳಿಕ ಸಂಪ್ರದಾಯದಂತೆ ಬನ್ನಿ ಮುಡಿಯುವ ಕಾರ್ಯಕ್ರಮ ನೆರವೇರಿತು. ಗ್ರಾಮಸ್ಥರು ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ವಿಜಯದಶಮಿಯ ಶುಭಾಶಯಗಳನ್ನು ಹಂಚಿಕೊಂಡರು. ಬನ್ನಿ ವಿನಿಮಯವು ವಿಜಯ, ಪ್ರೀತಿ, ಸ್ನೇಹ ಹಾಗೂ ಸೌಹಾರ್ದತೆಯ ಸಂಕೇತವಾಗಿದ್ದು, ಗ್ರಾಮದ ಧಾರ್ಮಿಕ ಪರಂಪರೆ ಮತ್ತು ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸಿತು.

ಬನ್ನಿ ಮುಡಿಯುವ ಸಂಪ್ರದಾಯಕ್ಕೆ ವಿಶೇಷ ಮಹತ್ವ

ವಿಜಯದಶಮಿಯ ಅಂಗವಾಗಿ ಬನ್ನಿ ಮುಡಿಯುವ ಆಚರಣೆಯು ಗ್ರಾಮದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸಿತು. ಭಕ್ತರು ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ವಿಜಯದಶಮಿ ಶುಭಾಶಯಗಳನ್ನು ಹಂಚಿಕೊಂಡರು. ಬನ್ನಿ ವಿನಿಮಯವು ಪ್ರೀತಿ, ಸ್ನೇಹ, ವಿಜಯ ಹಾಗೂ ಸೌಹಾರ್ದತೆಯ ಸಂಕೇತವಾಗಿದ್ದು, ಗ್ರಾಮಸ್ಥರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿತು.

🌿 ಶ್ರೀ ದುರ್ಗಾದೇವಿಯ ಪಲ್ಲಕ್ಕಿ ಉತ್ಸವದೊಂದಿಗೆ ಪಾರಂಪರಿಕ ಸಂಪ್ರದಾಯ, ಧಾರ್ಮಿಕ ನಂಬಿಕೆ ಹಾಗೂ ಗ್ರಾಮೀಣ ಸಂಸ್ಕೃತಿಯ ಅನಾವರಣ ಶ್ರೀ ದೇವಿಯ ಪಲ್ಲಕ್ಕಿ ಉತ್ಸವದೊಂದಿಗೆ ಸಣ್ಣ ಬನ್ನಿ ಹಾಗೂ ದೊಡ್ಡ ಬನ್ನಿ ಆಚರಣೆಯನ್ನು ಸಂಪ್ರದಾಯಬದ್ಧವಾಗಿ ನೆರವೇರಿಸಲಾಗುತ್ತದೆ. ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಈ ವಿಶಿಷ್ಟ ಆಚರಣೆಯು ಗ್ರಾಮದ ಧಾರ್ಮಿಕ ನಂಬಿಕೆ, ಸಾಂಸ್ಕೃತಿಕ ಪರಂಪರೆ ಹಾಗೂ ಜನರ ಭಕ್ತಿಭಾವವನ್ನು ಪ್ರತಿಬಿಂಬಿಸುತ್ತದೆ.

🌾 ಜೋಳದ ತೆನೆಗೆ ವಿಶೇಷ ಮಹತ್ವ

ಈ ಆಚರಣೆಯ ಮತ್ತೊಂದು ವಿಶೇಷವೆಂದರೆ ಜೋಳದ ತೆನೆ ಹಾಗೂ ಕಾಳುಗಳಿಗೆ ನೀಡುವ ಮಹತ್ವ. ಬನ್ನಿ ಆಚರಣೆಯ ಸಂದರ್ಭದಲ್ಲಿ ಜೋಳದ ಬೇಳೆಯನ್ನು ಹೊತ್ತು ಮನೆಗೆ ತಂದು, ಕಾಳುಗಳಿಂದ ಕೂಡಿದ ಜೋಳದ ದಂಟನ್ನು ಮನೆಯ ಮೇಲ್ಛಾವಣಿಯ ಮೇಲೆ ಎಸೆಯುವ ಸಂಪ್ರದಾಯವಿದೆ. ಈ ಆಚರಣೆ ಪೂರ್ಣಗೊಂಡ ಬಳಿಕವೇ ಮನೆಗಳಲ್ಲಿ ವಿವಿಧ ಶುಭಕಾರ್ಯಗಳು ಹಾಗೂ ಇತರ ಕಾರ್ಯಕ್ರಮಗಳನ್ನು ಆರಂಭಿಸುವುದು ಇಲ್ಲಿನ ವಿಶೇಷ ನಂಬಿಕೆಯಾಗಿದೆ.

ಕೃಷಿ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿರುವ ಈ ಸಂಪ್ರದಾಯವು ಧಾರ್ಮಿಕ ಆಚರಣೆಗಳ ಜೊತೆಗೆ ಗ್ರಾಮೀಣ ಬದುಕಿನ ನಂಟನ್ನೂ ಎತ್ತಿ ತೋರಿಸುತ್ತದೆ.

🏹 ಐತಿಹಾಸಿಕ ಪರಂಪರೆಯ ಪ್ರತೀಕವಾದ ದೊಡ್ಡ ಬನ್ನಿ

ದೊಡ್ಡ ಬನ್ನಿ ಆಚರಣೆಯಲ್ಲಿ ಗ್ರಾಮದ ರಾಜಮನೆತನದ ಗೌಡರು, ಹಿರೇಮಠದ ಹಿರಿಯರು ಹಾಗೂ ಪಾರಂಪರಿಕವಾಗಿ ಈ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿರುವ ಮನೆತನದವರು ಭಾಗವಹಿಸುತ್ತಾರೆ. ಹಲಗೆ ಭಜನೆ ಹಾಗೂ ವಿವಿಧ ವಾದ್ಯಗಳೊಂದಿಗೆ ಬಿಲ್ಲು, ಬತ್ತಳಿಕೆ ಮತ್ತು ಕತ್ತಿಗಳನ್ನು ಹೊತ್ತು ನಿಗದಿತ ಬನ್ನಿ ಮರದ ಬಳಿಗೆ ತೆರಳಿ ಪೂಜೆ ಸಲ್ಲಿಸುವುದು ಈ ಆಚರಣೆಯ ವಿಶೇಷವಾಗಿದೆ.

ಬಿಲ್ಲಿನ ಬಾಣದ ತುದಿಗೆ ಬಂಗಾರ, ಬೆಳ್ಳಿ ಸೇರಿದಂತೆ ವಿವಿಧ ವಸ್ತುಗಳನ್ನು ಜೋಡಿಸಿ ಹಿರಿಯರು ಬಾಣ ಹಾರಿಸುವ ಸಂಪ್ರದಾಯವೂ ಇಲ್ಲಿದೆ. ಬಾಣದ ತುದಿಗೆ ಜೋಡಿಸಿದ ವಸ್ತು ಯಾರಿಗೆ ದೊರೆಯುತ್ತದೆಯೋ ಅವರನ್ನು ಅದೃಷ್ಟಶಾಲಿ ಎಂದು ಭಾವಿಸಲಾಗುತ್ತದೆ.  ದೊರೆತ ವಸ್ತುವನ್ನು ಮನೆಗೆ ಕೊಂಡೊಯ್ದು ವರ್ಷವಿಡೀ ಪೂಜಿಸುವುದು ಈ ಆಚರಣೆಯ ಪ್ರಮುಖ ನಂಬಿಕೆಯಾಗಿದೆ.

🤝 ಬನ್ನಿ ವಿನಿಮಯ: ಪ್ರೀತಿ, ಸ್ನೇಹ ಮತ್ತು ಸೌಹಾರ್ದತೆಯ ಸಂಕೇತ

ಬನ್ನಿ ಮುಡಿಯುವುದು ಹಾಗೂ ಪರಸ್ಪರ ಬನ್ನಿ ವಿನಿಮಯ ಮಾಡಿಕೊಳ್ಳುವುದು ವಿಜಯ, ಸ್ನೇಹ, ಪ್ರೀತಿ ಮತ್ತು ಸೌಹಾರ್ದತೆಯ ಸಂಕೇತವಾಗಿದೆ. ಹಬ್ಬದ ಆಚರಣೆಯ ಮೂಲಕ ಗ್ರಾಮಸ್ಥರು ಪರಸ್ಪರ ಶುಭಾಶಯಗಳನ್ನು ಹಂಚಿಕೊಂಡು, ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಾರೆ.

ಆಧುನಿಕತೆಯ ನಡುವೆಯೂ ಹಿರೇನಂದಿಹಳ್ಳಿ ಗ್ರಾಮಸ್ಥರು ತಮ್ಮ ಪೂರ್ವಜರಿಂದ ಬಂದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂಪ್ರದಾಯಗಳನ್ನು ಉಳಿಸಿಕೊಂಡು ಬರುತ್ತಿರುವುದು ಗಮನಾರ್ಹವಾಗಿದೆ. ಶ್ರೀ ದೇವಿಯ ಪಲ್ಲಕ್ಕಿ ಉತ್ಸವ, ಸಣ್ಣ ಬನ್ನಿ, ದೊಡ್ಡ ಬನ್ನಿ ಹಾಗೂ ಜೋಳದ ತೆನೆಗೆ ಸಂಬಂಧಿಸಿದ ಆಚರಣೆಗಳು ಗ್ರಾಮದ ವಿಶಿಷ್ಟ ಸಾಂಸ್ಕೃತಿಕ ಗುರುತಾಗಿ ರೂಪುಗೊಂಡಿವೆ.

ಯೋಗಿರಾಜ ಶ್ರೀ ನಾಗಭೂಷಣ ‌ಶಿವಯೋಗಿಗಳು ಹಾಗೂ ಅವರ ಉತ್ತರಾಧಿಕಾರಿ ಶ್ರೀ ಪ್ರಣವಾನಂದ ಸ್ವಾಮಿಗಳು ಹಿರಿಯರು ತಲೆಮಾರುಗಳಿಂದ ಸಾಮರಸ್ಯ ಜಾತಾತಿತವಾಗಿ ಬೇದ ಬಾವ ಇಲ್ಲದೆ ಬಂದ ಸಂಪ್ರದಾಯವನ್ನು ಉಳಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವ ಮೂಲಕ ಹಿರೇನಂದಿಹಳ್ಳಿ ಗ್ರಾಮವು ತನ್ನ ಧಾರ್ಮಿಕ ನಂಬಿಕೆ ಹಾಗೂ ಗ್ರಾಮೀಣ ಸಂಸ್ಕೃತಿಯ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿದೆ.

ಶ್ರೀ ದುರ್ಗಾದೇವಿಯ ಆಶೀರ್ವಾದದಿಂದ ನಾಡಿನಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಹಾಗೂ ಎಲ್ಲರ ಬದುಕಿನಲ್ಲಿ ಒಳಿತಾಗಲಿ ಎಂದು ಭಕ್ತರು ಪ್ರಾರ್ಥಿಸಿದರು.

🤝 ಪ್ರೀತಿ ಹಂಚಿ, ದ್ವೇಷ ಮರೆತು, ಸೌಹಾರ್ದತೆಯ ಸಂದೇಶ ಸಾರೋಣ…

ಬನ್ನಿ ನೀಡಿ, ಸ್ನೇಹ ಬೆಳೆಸೋಣ. ಬನ್ನಿ ನೀಡಿ, ಮನಸ್ತಾಪ ಮರೆತು ಒಂದಾಗೋಣ.

“ಬನ್ನಿ ಬಂಗಾರವಾಗಲಿ, ಬದುಕು ಹಸನಾಗಲಿ, ಸಂಬಂಧಗಳು ಸದಾ ಸಿಹಿಯಾಗಿರಲಿ!”

ಸರ್ವರಿಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು!

🙏 ಜೈ ಮಾತಾ ದುರ್ಗಾದೇವಿ!

ಸಮಯವಾಣಿ ನ್ಯೂಸ್ | ಗಡಿನಾಡು ಸಮಾಚಾರ
✍️ ಸುದ್ದಿ ಸಂಪಾದನೆ: ಮಡಿವಾಳಪ್ಪ ದಾಸನಕೊಪ್ಪ

Leave a Comment

error: Content is protected !!