ಸತ್ಸಂಗದಿಂದ ಜ್ಞಾನ, ಜ್ಞಾನದಿಂದ ಆನಂದಮಯ ಜೀವನ : ಅಮೃತಾನಂದ ಸ್ವಾಮೀಜಿ

ಭೌತಿಕ ಸಂಪತ್ತಿಗಿಂತ ಜ್ಞಾನವೇ ಶ್ರೇಷ್ಠ ಸಂಪತ್ತು; ಪ್ರೀತಿ, ಸಹನೆ, ವಿವೇಕದಿಂದ ಬದುಕಿ

ಎಂ.ಕೆ. ಹುಬ್ಬಳ್ಳಿ: ಹಣ ಮತ್ತು ಆಸ್ತಿ ಸಂಪಾದಿಸುವುದಷ್ಟೇ ನಿಜವಾದ ಶ್ರೀಮಂತಿಕೆಯಲ್ಲ. ಜ್ಞಾನವನ್ನು ಪಡೆದು, ಇರುವುದರಲ್ಲಿ ತೃಪ್ತಿ ಕಂಡುಕೊಂಡು, ಇತರರ ಸಂತೋಷದಲ್ಲಿ ಸಂತೋಷಪಡುವುದೇ ನಿಜವಾದ ಶ್ರೀಮಂತಿಕೆ ಎಂದು ಬಾಲಗಾಂವ್ ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ ಅಮೃತಾನಂದ ಸ್ವಾಮೀಜಿ ಹೇಳಿದರು.

ಚೆನ್ನಮ್ಮನ ಕಿತ್ತೂರು ತಾಲ್ಲೂಕಿನ ಎಂ.ಕೆ. ಹುಬ್ಬಳ್ಳಿಯ ಹೊಳಿಹೊಸೂರು ರಸ್ತೆಯಲ್ಲಿರುವ ಅನುಭವ ಮಂಟಪ ಮಂಗಳ ಕಾರ್ಯಾಲಯದಲ್ಲಿ ಬುಧವಾರ (ಅ. 28) ನಡೆದ ಆಧ್ಯಾತ್ಮಿಕ ಪ್ರವಚನದಲ್ಲಿ ಅವರು ಆಶೀರ್ವಚನ ನೀಡಿದರು.

ಸಂತರ ಮತ್ತು ಶರಣರ ಬೋಧನೆಗಳು ಮನುಷ್ಯನ ಜೀವನಕ್ಕೆ ಸರಿಯಾದ ಮಾರ್ಗದರ್ಶನ ನೀಡುತ್ತವೆ. ಸತ್ಸಂಗವು ಅಜ್ಞಾನವನ್ನು ದೂರಮಾಡಿ, ವಿವೇಕ, ಮನಃಶಾಂತಿ ಹಾಗೂ ಆನಂದದಿಂದ ಬದುಕುವ ಕಲೆಯನ್ನು ಕಲಿಸುತ್ತದೆ. ಭೌತಿಕ ಸಂಪತ್ತಿಗಿಂತ ಜ್ಞಾನವೇ ಶ್ರೇಷ್ಠ ಸಂಪತ್ತಾಗಿದ್ದು, ನಮ್ಮಲ್ಲಿರುವುದನ್ನು ಸದುಪಯೋಗಪಡಿಸಿಕೊಂಡು ಜೀವನದ ಸೌಂದರ್ಯವನ್ನು ಆಸ್ವಾದಿಸಬೇಕು ಎಂದು ತಿಳಿಸಿದರು.

ನಿಸರ್ಗದೊಂದಿಗೆ ಬೆರೆಯುವುದು, ಕಷ್ಟಗಳನ್ನು ಧೈರ್ಯದಿಂದ ಎದುರಿಸುವುದು ಹಾಗೂ ಇತರರ ಏಳಿಗೆಯನ್ನು ಕಂಡು ಅಸೂಯೆಪಡುವ ಬದಲು ಸಂತೋಷಪಡುವುದು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಗುಣಗಳಾಗಿವೆ. ಅಸೂಯೆ ಮತ್ತು ದ್ವೇಷ ಮನಃಶಾಂತಿಯನ್ನು ಹಾಳುಮಾಡುತ್ತವೆ. ಪ್ರೀತಿ, ಸಹನೆ, ವಿವೇಕ ಹಾಗೂ ಕೃತಜ್ಞತೆಯ ಮನೋಭಾವದಿಂದ ಬದುಕಿದಾಗ ಜೀವನ ಸಾರ್ಥಕವಾಗುತ್ತದೆ ಎಂದರು.

ಬಸವಣ್ಣನವರು ಹಾಗೂ ಶರಣರು ಸಾರಿದ ತತ್ವಗಳನ್ನು ಸ್ಮರಿಸಿದ ಸ್ವಾಮೀಜಿ, ನೀರು, ಅನ್ನ ಮತ್ತು ಸುಭಾಷಿತಗಳು ಭೂಮಿಯ ಮೇಲಿನ ನಿಜವಾದ ಮೂರು ರತ್ನಗಳು ಎಂಬ ಸುಭಾಷಿತದ ಮಹತ್ವವನ್ನು ವಿವರಿಸಿದರು. ನೀರು ಮತ್ತು ಅನ್ನ ದೇಹವನ್ನು ಪೋಷಿಸಿದರೆ, ಸುಭಾಷಿತಗಳು ಮನಸ್ಸು ಮತ್ತು ಬುದ್ಧಿಯನ್ನು ಪೋಷಿಸುತ್ತವೆ. ಹೀಗಾಗಿ ಸಂತರ ಹಾಗೂ ಶರಣರ ವಚನಗಳನ್ನು ಆಲಿಸುವುದರ ಜೊತೆಗೆ ಅವುಗಳ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಇತರರ ಬಗ್ಗೆ ಮಾತನಾಡುವಾಗ ಅದು ಸತ್ಯವೇ, ಒಳ್ಳೆಯದೇ ಮತ್ತು ಪ್ರಯೋಜನಕಾರಿಯೇ ಎಂಬ ಮೂರು ಅಂಶಗಳನ್ನು ಪರಿಶೀಲಿಸಬೇಕು. ಜೀವನದಲ್ಲಿ ಎದುರಾಗುವ ಅನಿರೀಕ್ಷಿತ ಸನ್ನಿವೇಶಗಳನ್ನು ಸಮರ್ಥವಾಗಿ ಎದುರಿಸಲು ಸಂತರ ಬೋಧನೆಗಳು ಮಾರ್ಗದರ್ಶಕವಾಗಬೇಕು. ಸತ್ಸಂಗದಲ್ಲಿ ಭಾಗವಹಿಸುವ ಮೂಲಕ ಜ್ಞಾನ ಸಂಪಾದಿಸಿ, ವಿವೇಕ ಬೆಳೆಸಿಕೊಂಡು ಆನಂದಮಯ ಜೀವನ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಇಂತಹ ಆಧ್ಯಾತ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಜ್ಞಾನ, ಶಾಂತಿ, ಸೌಹಾರ್ದ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ಸತ್ಸಂಗದ ಆಯೋಜಕರ ಕಾರ್ಯವನ್ನು ಶ್ಲಾಘಿಸಿದರು.

ಪ್ರವಚನದ ನಂತರ ದಾಸೋಹ ಸೇವೆ ಸಲ್ಲಿಸಿದ ಫಕೀರಪ್ಪ ಬನ್ನೂರು, ಶಿಕ್ಷಕರು ಹಾಗೂ ಶಂಕರಪ್ಪ ತುಮ್ಮರಗುದ್ದಿ ಅವರನ್ನು ಸಮಿತಿಯ ವತಿಯಿಂದ ಸತ್ಕರಿಸಲಾಯಿತು.

ವರದಿ: ಸಮಯವಾಣಿ ನ್ಯೂಸ್
ವೆಬ್‌ಸೈಟ್: www.samayavani.com

Leave a Comment

error: Content is protected !!