ಖಾನಾಪುರ: ಗೋಲಿಹಳ್ಳಿ ಹೊಸಟ್ಟಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ತಕ್ಷಣ ಸೆರೆಹಿಡಿಯಲು ಬಸವರಾಜ್ ಭಂಗಿ ಆಗ್ರಹ

ಖಾನಾಪುರ : ತಾಲೂಕಿನ ಗೋಲಿಹಳ್ಳಿ ಅರಣ್ಯ ವ್ಯಾಪ್ತಿಗೆ ಒಳಪಡುವ ಗೋಲಿಹಳ್ಳಿ ಹೊಸಟ್ಟಿ ಗ್ರಾಮದಲ್ಲಿ ಹಾಡಹಗಲೇ ಚಿರತೆ ರಾಜಾರೋಷವಾಗಿ ಓಡಾಡುತ್ತಿದ್ದು, ಗ್ರಾಮಸ್ಥರು ತೀವ್ರ ಭೀತಿಯ ವಾತಾವರಣದಲ್ಲಿ ದಿನ ಕಳೆಯುವಂತಾಗಿದೆ.

​ಪಶ್ಚಿಮ ಘಟ್ಟದ ಅಂಚಿಗೆ ಹೊಂದಿಕೊಂಡಿರುವ ಈ ಭಾಗದ ಹಳ್ಳಿಗಳಲ್ಲಿ ನಿರಂತರವಾಗಿ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗುತ್ತಿದೆ. ಗ್ರಾಮದ ರಸ್ತೆಗಳಲ್ಲಿ ಹಾಗೂ ಜನವಸತಿ ಪ್ರದೇಶಗಳಲ್ಲಿ ಚಿರತೆ ಪ್ರತ್ಯಕ್ಷ ವಾಗುತ್ತಿರುವುದರಿಂದ ರೈತರು ಮತ್ತು ಕೂಲಿ ಕಾರ್ಮಿಕರು ತಮ್ಮ ಕೃಷಿ ಜಮೀನುಗಳಿಗೆ ತೆರಳಲು ಹಿಂಜರಿಯುತ್ತಿದ್ದಾರೆ. ಜಾನುವಾರುಗಳ ರಕ್ಷಣೆಗೂ ತೊಂದರೆಯಾಗಿದ್ದು, ಶಾಲಾ ಮಕ್ಕಳು ಹಾಗೂ ವೃದ್ಧರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ.

​ಇಷ್ಟೆಲ್ಲಾ ಭೀತಿಯ ವಾತಾವರಣ ನಿರ್ಮಾಣವಾಗಿದ್ದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

​ಕರ್ನಾಟಕ ರಾಜ್ಯ ಗಡಿನಾಡು ಹಿತರಕ್ಷಣಾ ವೇದಿಕೆ ಆಗ್ರಹ:

ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದ್ದು, ಈ ಕೂಡಲೇ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಗ್ರಾಮದಲ್ಲಿ ಬೋನು ಇರಿಸಿ ಚಿರತೆಯನ್ನು ಸೆರೆಹಿಡಿದು ಸುರಕ್ಷಿತವಾಗಿ ದಟ್ಟ ಅರಣ್ಯಕ್ಕೆ ಸ್ಥಳಾಂತರಿಸಬೇಕು ಎಂದು ಕರ್ನಾಟಕ ರಾಜ್ಯ ಗಡಿನಾಡು ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಬಸವರಾಜ್ ಭಂಗಿ ಪ್ರಬಲವಾಗಿ ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ಗ್ರಾಮಸ್ಥರೊಂದಿಗೆ ಸೇರಿ ಅರಣ್ಯ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

Leave a Comment

error: Content is protected !!