ಹಿರೇನಂದಿಹಳ್ಳಿಯಲ್ಲಿ ಬಸವ ಸಂಸ್ಕೃತಿಯ ಸಂದೇಶ : ಶ್ರಾವಣ ಮಾಸದ ಪುರಾಣ, ಅನ್ನಪ್ರಸಾದ ಸೇವೆ ಹಾಗೂ ಬಸವ ಜ್ಯೋತಿ ಸ್ವಾಗತಕ್ಕೆ ಗ್ರಾಮಸ್ಥರಿಂದ ಭಕ್ತಿ–ಭಾವದ ಸ್ಪಂದನೆ

ಹಿರೇನಂದಿಹಳ್ಳಿ: ಶ್ರಾವಣ ಮಾಸದ ಅಂಗವಾಗಿ ಹಿರೇನಂದಿಹಳ್ಳಿ ಗ್ರಾಮದ ಶ್ರೀ ವಿಠ್ಠಲ–ರುಕ್ಮಿಣಿ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನಡೆಯುತ್ತಿವೆ. ಗರಗದ ಶ್ರೀ ಯೋಗಿ ಮಡಿವಾಳೇಶ್ವರ ಪುರಾಣ ಪ್ರವಚನ ನಡೆಯುತ್ತಿದ್ದು, ಗ್ರಾಮಸ್ಥರು ಪ್ರತಿದಿನವೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ.

ಪುರಾಣದ ಅಂಗವಾಗಿ ಪ್ರತಿದಿನ ಗ್ರಾಮಸ್ಥರು ಸ್ವಯಂಪ್ರೇರಣೆಯಿಂದ ಅನ್ನಪ್ರಸಾದ ಸೇವೆ ಸಲ್ಲಿಸುತ್ತಿರುವುದು ವಿಶೇಷವಾಗಿದೆ. “ಇಂದು ನಮ್ಮದು, ನಾಳೆ ನಿಮ್ಮದು”ಎಂಬ ಭಾವನೆಯೊಂದಿಗೆ ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಸಿಹಿ, ಪಲಾವ್, ಉಪ್ಪಿಟ್ಟು, ಶಿರಾ ಸೇರಿದಂತೆ ವಿವಿಧ ಪ್ರಸಾದಗಳನ್ನು ಭಕ್ತಿಯಿಂದ ಅರ್ಪಿಸುತ್ತಿದ್ದಾರೆ. ಜಾತಿ–ಧರ್ಮದ ಭೇದವಿಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ಭಾಗವಹಿಸುತ್ತಿರುವುದು ಗ್ರಾಮದ ಸೌಹಾರ್ದತೆ ಹಾಗೂ ಬಸವ ಸಂಸ್ಕೃತಿಗೆ ಸಾಕ್ಷಿಯಾಗಿದೆ. ಅದೇ ರೀತಿ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಹಾಗೂ ವಿವಿದ ದೇವಸ್ಥಾನಗಳಲ್ಲಿಯೂ ಹಲವು ವರ್ಷಗಳಿಂದ ಹಿರಿಯರು ಹಾಗೂ ಗ್ರಾಮಸ್ಥರು ಧಾರ್ಮಿಕ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿರುವುದು ಗಮನಾರ್ಹವಾಗಿದೆ.

ಬಸವ ಜ್ಯೋತಿಗೆ ಭವ್ಯ ಸ್ವಾಗತ

ಶ್ರಾವಣ ಮಾಸದ ಪ್ರಯುಕ್ತ ಮಹಾರಾಷ್ಟ್ರದ ಶ್ರೀ ಅಲ್ಲಮಗೀರಿ ಪೀಠದ ಪೂಜ್ಯ ಶ್ರೀ ಡಾ ಬಸವಪ್ರಕಾಶ ಸ್ವಾಮೀಜಿಗಳ ನೇತೃತ್ವದಲ್ಲಿ ಶ್ರೀ ಚನ್ನಬಸವೇಶ್ವರ ಜ್ಯೋತಿ ಗ್ರಾಮದಿಂದ ಗ್ರಾಮಕ್ಕೆ ಸಂಚರಿಸುತ್ತಿದ್ದು, ಶರಣರೊಂದಿಗೆ ಬಸವ ವಚನಗಳು ಹಾಗೂ ಲಿಂಗಾಯತ ಧರ್ಮದ ವಿಚಾರಧಾರೆಗಳ ಕುರಿತು ಜನಜಾಗೃತಿ ಮೂಡಿಸಲಾಗುತ್ತಿದೆ.

ಹಿರೇನಂದಿಹಳ್ಳಿಗೆ ಜ್ಯೋತಿ ಆಗಮಿಸಿದ ಸಂದರ್ಭದಲ್ಲಿ ಶ್ರೀ ವಿಠ್ಠಲ–ರುಕ್ಮಿಣಿ ದೇವಸ್ಥಾನ ಕಮಿಟಿಯ ಪದಾಧಿಕಾರಿಗಳು, ಹಿರಿಯರು, ಭಜನಾ ಮಂಡಳಿ ಸದಸ್ಯರು ಹಾಗೂ ಗ್ರಾಮಸ್ಥರು ಭಜನೆ–ಕೀರ್ತನೆಯೊಂದಿಗೆ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಆತ್ಮೀಯವಾಗಿ ಬರಮಾಡಿಕೊಂಡು ಶ್ರೀ ವಿಠ್ಠಲ–ರುಕ್ಮಿಣಿ ದೇವಸ್ಥಾನಕ್ಕೆ ಕರೆತಂದರು.

ಈ ಸಂದರ್ಭದಲ್ಲಿ ಮಾತನಾಡಿದ ಪೂಜ್ಯ ಶ್ರೀ ಡಾ ಬಸವಪ್ರಕಾಶ ಸ್ವಾಮೀಜಿಗಳು ಶರಣರ ನಾಡಿನಲ್ಲಿ ಇಂತಹ ಪವಿತ್ರ ಕಾರ್ಯಕ್ರಮಗಳು ನಡೆಯುತ್ತಿರುವುದು ಸಂತಸದ ಸಂಗತಿ ಎಂದರು. ಜಾತಿ–ಧರ್ಮದ ಭೇದ ಬದಿಗಿಟ್ಟು ಎಲ್ಲರೂ ಒಂದೇ ವೇದಿಕೆಯಲ್ಲಿ ಸೇರಿ ಬಸವ ವಿಚಾರಧಾರೆಯನ್ನು ಸ್ವೀಕರಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು. ಪ್ರಾಣಿಗಳ ಮೇಲೆ ಕರುಣೆ ತೋರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ದೇವರ ಹೆಸರಿನಲ್ಲಿ ಪ್ರಾಣಿಬಲಿ ನೀಡುವ ಪದ್ಧತಿಯನ್ನು ಕೈಬಿಡಬೇಕು ಎಂದು ಕರೆ ನೀಡಿದರು. ಸಕಲ ಜೀವಿಗಳನ್ನೂ ಪ್ರೀತಿಸುವುದು ಹಾಗೂ ಕರುಣೆಯಿಂದ ಕಾಣುವುದು ಬಸವ ಧರ್ಮದ ಪ್ರಮುಖ ಸಂದೇಶವಾಗಿದೆ ಎಂದರು.

ಯುವಜನರು ಹಾಗೂ ಮಕ್ಕಳು ಮೊಬೈಲ್‌ ಬಳಕೆಯಲ್ಲಿ ಸಮಯ ಕಳೆಯುವುದಕ್ಕಿಂತ ಆಧ್ಯಾತ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. “ವಿಭೂತಿ ಧಾರಣೆ ಮದುವೆ, ಶವಸಂಸ್ಕಾರ ಹಾಗೂ ಇತರೆ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಬಾರದು. ಅದು ನಮ್ಮ ಜೀವನಶೈಲಿಯ ಒಂದು ಭಾಗವಾಗಿ, ಪ್ರತಿನಿತ್ಯದ ಬದುಕಿನಲ್ಲಿ ಪಾಲಿಸುವ ಪವಿತ್ರ ಪದ್ಧತಿಯಾಗಬೇಕು” ಬಸವಣ್ಣನವರ ವಚನಗಳು ಮತ್ತು ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ನಿರಂತರವಾಗಬೇಕು ಎಂದು ಪೂಜ್ಯ ಶ್ರೀ ಡಾ ಬಸವಪ್ರಕಾಶ ಸ್ವಾಮೀಜಿಗಳು ಹೇಳಿದರು.

ಹಿರೇನಂದಿಹಳ್ಳಿ–ಚಿಕ್ಕನಂದಿಹಳ್ಳಿ ‘ಬಸವ ಹಳ್ಳಿ’

ಬಸವ ಶರಣ ಶ್ರೀ ಅಶೋಕ ಅಣ್ಣಾವರ ಮಾತನಾಡಿ, ಹಿರೇನಂದಿಹಳ್ಳಿ ಹಾಗೂ ಚಿಕ್ಕನಂದಿಹಳ್ಳಿ ಗ್ರಾಮಗಳು ಕೇವಲ ಗ್ರಾಮಗಳಲ್ಲ; ಇವು ಬಸವ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಉಳಿಸಿಕೊಂಡಿರುವ ‘ಹಿರೇ ಬಸವ ಹಳ್ಳಿ’ ಹಾಗೂ ‘ಚಿಕ್ಕ ಬಸವ ಹಳ್ಳಿ’ ಎಂಬ ಸಂದೇಶವನ್ನು ನೀಡಿದರು. ಗ್ರಾಮದಲ್ಲಿ ಬಸವ ಸಂಸ್ಕೃತಿ, ಧಾರ್ಮಿಕ ಆಚರಣೆ, ಪೂಜೆ–ನಮಸ್ಕಾರ ಹಾಗೂ ಪರಸ್ಪರ ಸಹಕಾರದ ಮನೋಭಾವ ಮುಂದು ವರಿಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಜನ್ಮದಿನದಂದು ಅನ್ನಪ್ರಸಾದ ಸೇವೆ – ದಂಪತಿಗೆ ಸನ್ಮಾನ

ಕಾರ್ಯಕ್ರಮದ ಸಂದರ್ಭದಲ್ಲಿ ತಮ್ಮ ಜನ್ಮದಿನದ ಪ್ರಯುಕ್ತ ಶ್ರೀಮತಿ ಲಕ್ಷ್ಮೀ ಬಸವರಾಜ್ ಫಕೀರಣ್ಣವರ ಅವರು ಅನ್ನಪ್ರಸಾದ ಸೇವೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪೂಜ್ಯ ಶ್ರೀಗಳು ಹಾಗೂ ದೇವಸ್ಥಾನ ಕಮಿಟಿಯ ಪದಾಧಿಕಾರಿಗಳು ಅವರನ್ನು ಹಾಗೂ ಅವರ ಪತಿಯನ್ನು ಆತ್ಮೀಯವಾಗಿ ಗೌರವಿಸಿ, ಪುಷ್ಪಮಾಲೆ ಹಾಕಿ ಆಶೀರ್ವದಿಸಿದರು.

ಅದೇ ರೀತಿ ಕುಮಾರಿ ಶ್ರೇಯಾ ಉಳವಪ್ಪ ಫಕೀರಣ್ಣವರ ಅವರು ಶ್ರೀ ನಾಗಭೂಷಣ ಶಿವಯೋಗಿಗಳವರ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ತಾಲ್ಲೂಕು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದು ಗ್ರಾಮಕ್ಕೆ ಕೀರ್ತಿ ತಂದ ಹಿನ್ನೆಲೆಯಲ್ಲಿ ಶ್ರೀಗಳು ಹಾಗೂ ದೇವಸ್ಥಾನ ಕಮಿಟಿ ವತಿಯಿಂದ ಸನ್ಮಾನಿಸಲಾಯಿತು.

ಮಕ್ಕಳು ಹಾಗೂ ಯುವಜನರಿಗೆ ಪ್ರೋತ್ಸಾಹ ನೀಡುವ ಇಂತಹ ಕಾರ್ಯಕ್ರಮಗಳು ಮುಂದಿನ ಪೀಳಿಗೆಯಲ್ಲಿ ಸೇವಾ ಮನೋಭಾವ ಬೆಳೆಸಲು ಪ್ರೇರಣೆಯಾಗಲಿವೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಶರಣ ಶ್ರೀ ಅಶೋಕ ಅಳನಾವರ , ನಾಗಪ್ಪ ಗುಳೆದಕೊಪ್ಪ, ರುದ್ರಗೌಡ ಪಾಟೀಲ, ಶ್ರೀಧರ ಮಲಶೆಟ್ಟಿ ಸೇರಿದಂತೆ ಗ್ರಾಮದ ಪ್ರಮುಖರಾದ ನಿಂಗಪ್ಪ ಅಂಗಡಿ, ಉಳ್ಳನಗೌಡ ಪಾಟೀಲ, ಮಲ್ಲಯ್ಯ ಪೂಜಾರ, ಬಸಯ್ಯಾ ಪೂಜಾರ, ಗೆದ್ದಪ್ಪ ಅಂಗಡಿ, ಚಂದ್ರಪ್ಪ ಸರಸಟ್ಟಿ, ಮಲ್ಲೇಶ್ ಹಿತ್ತಲಮನಿ, ಬಸವರಾಜ ಅಂಗಡಿ, ಮಹಾರುದ್ರ ಜೊಡಂಗಿ, ಸುರೇಶ ಸರಸಟ್ಟಿ ಹಾಗೂ ಶ್ರೀ ನಾಗಭೂಷಣ ಭಜನಾ ಮಂಡಳಿಯ ಸದಸ್ಯರು, ಮಾತೆಯರು, ಪೂಜಾರಿಗಳು, ಗ್ರಾಮಸ್ಥರು, ಗಣ್ಯರು ಮತ್ತು ಹಿರಿಯರು ಉಪಸ್ಥಿತರಿದ್ದರು.

ಶ್ರಾವಣ ಮಾಸದ ಧಾರ್ಮಿಕ ಕಾರ್ಯಕ್ರಮದ ಮೂಲಕ ಭಕ್ತಿ, ಸೇವೆ, ಸಮಾನತೆ, ಸೌಹಾರ್ದತೆ ಹಾಗೂ ಬಸವ ಸಂಸ್ಕೃತಿಯ ಸಂದೇಶವನ್ನು ಸಾರಿದ ಹಿರೇನಂದಿಹಳ್ಳಿ ಗ್ರಾಮವು ಎಲ್ಲರ ಗಮನ ಸೆಳೆಯಿತು.

Leave a Comment

error: Content is protected !!