ವರದಿ : ಎಂ ರಾಜಾಬಾಯಿ/ ಶಶಿಕಾಂತ ತಳವಾರ, ಖಾನಾಪೂರ
ಬೆಳಗಾವಿ : ಜಿಲ್ಲೆಯ ಖಾನಾಪುರ ತಾಲ್ಲೂಕಿನ ಸುಳೇಗಾಳಿ ಗ್ರಾಮದಲ್ಲಿ ಸಂಭವಿಸಿದ ವಿದ್ಯುತ ದುರ್ಘಟನೆಯಲ್ಲಿ ಎರಡು ಕಾಡು ಆನೆಗಳು ಸ್ಥಳದಲ್ಲೇ ಮೃತಪಟ್ಟಿವೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ದುರ್ಘಟನೆ ಹೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದ ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಆನೆಗಳ ಸಾವು ಸಂಭವಿಸಿದೆ ಎಂಬುದು ಸ್ಪಷ್ಟವಾಗಿದೆ.
ಘಟನೆಯ ವಿವರ ಹೀಗಿದೆ – ದೇವರಾಯಿ ಗ್ರಾಮದ ಸಮೀಪದ ಸುಳೇಗಾಳಿ ಪ್ರದೇಶದ ರೈತ ಗಣಪತಿ ಸಾತೇರಿ ಗುರುವ್ ಹಾಗೂ ಇತರ ರೈತರು ತಮ್ಮ ಬೆಳೆಗಳನ್ನು ಕಾಡುಪ್ರಾಣಿಗಳಿಂದ ರಕ್ಷಿಸಲು ಸೌರಶಕ್ತಿಯ ಮೇಲೆ ಕಾರ್ಯನಿರ್ವಹಿಸುವ ಶಾಕ್ ಕರೆಂಟ್ ಯಂತ್ರಗಳನ್ನು ಅಳವಡಿಸಿದ್ದರು. ಇಂತಹ ಯಂತ್ರಗಳನ್ನು ತಾಲ್ಲೂಕಿನ ಹಲವಾರು ರೈತರು ಬಳಸುತ್ತಿದ್ದಾರೆ. ಆದರೆ ಹೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದ, ಹೊಲದಿಂದ ಹಾದುಹೋಗುವ ವಿದ್ಯುತ್ ತಂತಿ ತುಂಡಾಗಿ ಕೆಲ ದಿನಗಳಿಂದ ಅದೇ ಸ್ಥಿತಿಯಲ್ಲಿ ಬಿದ್ದಿತ್ತು .
ಇಲಾಕೆಯ ಗಮನಕ್ಕೆ ತಂದರೂ ಕೂಡ ಹೆಸ್ಕಾಂ ಅಧಿಕಾರಿಗಳು ನಿರ್ಲಕ್ಷ ವಹಿಸಿ ದುರಸ್ಥಿಪಡಿಸದೆ ಉಧ್ಧಟತನ ಮೆರೆದಿದ್ದರು ನಿನ್ನೆ (ಶನಿವಾರ) ಮತ್ತೊಂದು ತಂತಿ ಹರಿದು ಬಿದ್ದಿದ್ದು, ಅದು ರೈತರು ಅಳವಡಿಸಿದ್ದ ಯಂತ್ರದ ತಂತಿಗೆ ತಾಗಿಕೊಂಡಿದ್ದ ಪರಿಣಾಮವಾಗಿ ಆ ತಂತಿಯಲ್ಲಿ ನೇರವಾಗಿ ವಿದ್ಯುತ್ ಪ್ರವಾಹ ಹರಿಯತೊಡಗಿತು. ಇದೇ ವೇಳೆ ಆಹಾರಕ್ಕಾಗಿ ಆ ಪ್ರದೇಶಕ್ಕೆ ಬಂದ ಎರಡು ಕಾಡು ಆನೆಗಳು ಆ ತಂತಿಗೆ ಸ್ಪರ್ಶವಾದ ಕ್ಷಣದಲ್ಲೇ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟಿವೆ.
ಘಟನೆಯ ಮಾಹಿತಿ ದೊರಕುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿ, ಪಂಚನಾಮೆ ಮಾಡಿಕೊಂಡು ಎರಡೂ ಆನೆಗಳ ಶವ ಪರೀಕ್ಷೆ ನಡೆಸಿದರು ಹಾಗೂ ಅಗತ್ಯ ಕಾನೂನು ಕ್ರಮ ಕೈಗೊಂಡಿದ್ದಾರೆ.












