ಕುಶಾಲನಗರ : ಸೈನಿಕ ಶಾಲೆ ಕೊಡಗು ತನ್ನ ಇತಿಹಾಸದಲ್ಲಿ ಮೊದಲ ಬಾರಿಗೆ ಅಸಾಧಾರಣ ಸಾಧನೆಯನ್ನು ದಾಖಲಿಸಿದೆ. 2025ರ ಸೆಪ್ಟೆಂಬರ್ 14ರಂದು ನಡೆದ ಪ್ರತಿಷ್ಠಿತ ಯು ಪಿ ಎಸ್ ಸಿ (UPSC) ಏನ್ ಡಿ ಎ (NDA) ಲಿಖಿತ ಪರೀಕ್ಷೆಯಲ್ಲಿ 23 ಮಂದಿ ವಿದ್ಯಾರ್ಥಿಗಳು ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಈ ಸಾಧನೆ ಶಾಲೆಯ ಶೈಕ್ಷಣಿಕ ಹಾಗೂ ಸೈನಿಕ ಕ್ಷೇತ್ರದ ಶ್ರೇಷ್ಠತೆಯ ಪಯಣದಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿದೆ.
ಈ ಐತಿಹಾಸಿಕ ಯಶಸ್ಸಿನ ಶ್ರೇಯಸ್ಸು ಶಾಲೆಯ ಪ್ರಾಂಶುಪಾಲ ಕರ್ನಲ್ ಅಮರ್‌ಜೀತ್ ಸಿಂಗ್ ಅವರ ದೂರ ದೃಷ್ಟಿಯ ಹಾಗೂ ಅವಿರತ ಪ್ರಯತ್ನದ ಸಾಕಾರವಾಗಿದೆ. ಅವರ ಮಾರ್ಗದರ್ಶನದಲ್ಲಿ ರೂಪುಗೊಂಡ ಸಮಗ್ರ ಕಾರ್ಯಯೋಜನೆಯನ್ನು ಉಪಪ್ರಾಂಶುಪಾಲ ವಿಂಗ್ ಕಮಾಂಡರ್ ಮೊಹಮ್ಮದ್ ಷಾಜಿ, ಹಿರಿಯ ಶಿಕ್ಷಕರಾದ ಶ್ರೀ ವಿಬಿನ್ ಕುಮಾರ್, ಏನ್ ಡಿ ಎ ಮೇಲ್ವಿಚಾರಕರಾದ ಶ್ರೀ ಸಂಜೀವ್ ಕಿರಣ್ ಹಾಗೂ ಸಮರ್ಪಿತ ಶಿಕ್ಷಕರಾದ ಶ್ರೀ ಸುರೇಶ್, ಶ್ರೀ ರಮೇಶ್, ಶ್ರೀಮತಿ ಶ್ರೀಲೇಖಾ ವಿ.ಎಸ್., ಶ್ರೀ ರಾಜಗೋಲ್ಕರ್, ಶ್ರೀ ಅಶೋಕನ್, ಶ್ರೀ ದಾದಾ ಕುಸನಾಲೆ ಹಾಗೂ ಶ್ರೀ ಅಶೋಕ್ ವೈ. ಕೆಂಗಾರೆ ಅವರ ನಿಷ್ಠೆಯುತ ಪರಿಶ್ರಮದಿಂದ ಯಶಸ್ವಿಯಾಗಿ ಜಾರಿಗೊಳಿಸಲಾಯಿತು.
ಅದೇ ರೀತಿ, ವಿಂಗ್ ಕಮಾಂಡರ್ ಪಿ ಪ್ರಕಾಶ್ ರಾವ್ ಅವರು ವಿಶೇಷ ತರಗತಿಗಳ ಮೂಲಕ ವಿದ್ಯಾರ್ಥಿಗಳ ಸಿದ್ಧತೆಯನ್ನು ಬಲಪಡಿಸಿದರು. ದೇಶದ ವಿವಿಧ ಭಾಗಗಳಿಂದ ಆಹ್ವಾನಿಸಲಾದ ಅತಿಥಿ ಬೋಧಕರ ಉಪನ್ಯಾಸಗಳು ಮತ್ತು ಸಂವೇದನಾತ್ಮಕ ಅಧಿವೇಶನಗಳನ್ನು ನಡೆಸಿ ವಿದ್ಯಾರ್ಥಿಗಳಿಗೆ ಸಮಗ್ರ ತರಬೇತಿ ಹಾಗೂ ಅಗತ್ಯ ಪರಿಚಯವನ್ನು ಒದಗಿಸಿದರು.
ಈ ಅಸಾಮಾನ್ಯ ಫಲಿತಾಂಶವು ಕೇವಲ ವಿದ್ಯಾರ್ಥಿಗಳ ಶ್ರಮದ ಸಾಕ್ಷಿಯಾಗಿಯೇ ನಿಲ್ಲದೆ, ಶಾಲೆಯ ಶಕ್ತಿಶಾಲಿ ಮಾರ್ಗದರ್ಶನ ವ್ಯವಸ್ಥೆ ಮತ್ತು ಅದಕ್ಕಿರುವ “ವೀರತೆ, ದೃಢತೆ, ಪ್ರಮಾಣಿಕತೆ” ಎಂಬ ಮೂಲಮೂಲ್ಯದ. ಪ್ರತಿಬಿಂಬವಾಗಿದೆ.
ಈ ಸಾಧನೆಯ ಮೂಲಕ ಸೈನಿಕ ಶಾಲೆ ಕೊಡಗು ಮತ್ತೊಮ್ಮೆ ಭವಿಷ್ಯದ ಭಾರತೀಯ ಸಶಸ್ತ್ರ ಪಡೆಗಳ ಅಧಿಕಾರಿ ನಾಯಕರ ಪೀಠವಾಗಿರುವುದನ್ನು ಸಾಬೀತುಪಡಿಸಿದೆ. ಈ ವಿದ್ಯಾರ್ಥಿಗಳು ಈ ವರ್ಷ ದೇಶದ ವಿವಿಧ ಭಾಗಗಳಲ್ಲಿ ನಡೆಯಲಿರುವ ಸೇವಾ ಆಯ್ಕೆ ಮಂಡಳಿಯ (ಎಸ್ ಎಸ್ ಬಿ )ಸಂದರ್ಶನಗಳಲ್ಲಿ ಹಾಜರಾಗಲಿದ್ದಾರೆ.
ಈ ಸಂದರ್ಭದಲ್ಲಿ ಪ್ರಾಂಶುಪಾಲ ಕರ್ನಲ್ ಅಮರ್‌ಜೀತ್ ಸಿಂಗ್ ಅವರು ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.












