ಸಮಯವಾಣಿ ಡೆಸ್ಕ್ : ಚನ್ನಮ್ಮನ ಕಿತ್ತೂರು ತಾಲ್ಲೂಕಿನಲ್ಲಿ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದೆ. ದಸರಾ ಹಬ್ಬದ ಮೊದಲ ದಿನವಾದ ಸೋಮವಾರ ದಿಂದ ಶ್ರೀ ನವದುರ್ಗೆಯರ ಅನುಗ್ರಹಕ್ಕಾಗಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆಯನ್ನು ಭಕ್ತರು ಸಲ್ಲಿಸಿದರು. ಬೆಳಗಿನ ಜಾವ ಮಹಿಳೆಯರು ಬನ್ನಿ ಮರಕ್ಕೆ ಶ್ರದ್ಧಾ ಭಕ್ತಿಯಿಂದ ಪೂಜೆ ನೆರವೇರಿಸಿದರು.
ಒಂಬತ್ತು ದಿನಗಳ ದಸರಾ ಹಬ್ಬವನ್ನು ಆಶ್ವೀಜ ಮಾಸದ ಶುದ್ಧ ಪ್ರತಿಪದದಿಂದ ಪ್ರಾರಂಭಿಸಿ ದಶಮಿಯವರೆಗಿನ ನವ ದಿನಗಳಲ್ಲಿ ನವದುರ್ಗೆಯರ ರೂಪದಲ್ಲಿರುವ ಶ್ರೀ ಮಹಾಲಕ್ಷ್ಮಿಯ ತುಷ್ಟಿಗಾಗಿ ಮತ್ತು ಅನುಗ್ರಹಕ್ಕಾಗಿ ಈ ನವರಾತ್ರಿಯ ವ್ರತವನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ಗುಂಪು ಗುಂಪಾಗಿ ಸೂರ್ಯೋದಯ ಮೊದಲು ಬ್ರಾಹ್ಮಿ ಸಮಯ ಬೆಳಗಿನ ಜಾವದಲ್ಲಿ ಬನ್ನಿ ಮಹಾಕಾಳಿ ದೇವಿಗೆ ಪೂಜೆ ಸಲ್ಲಿಸಿದರು.
‘ಶಕ್ತಿದೇವತೆ’ ಅಮ್ಮನ 9 ದಿನ ನಾನಾ ರೂಪಗಳಲ್ಲಿ ಭಕ್ತರಿಗೆ ದರ್ಶನ ನೀಡುವಳು. ದುರ್ಗೆಯನ್ನು ಉಪವಾಸ ಮತ್ತು ಇತರ ನೇಮಗಳಿಂದ ಪಾಲಿಸುತ್ತಾ ನವರಾತ್ರಿ ವ್ರತದ ವೇಳೆ ಶಮೀ ವೃಕ್ಷಕ್ಕೆ ಪೂಜೆ ಮಾಡಲಾಗುತ್ತದೆ’ ಎನ್ನುತ್ತಾರೆ ವ್ರತ ನಿರತ ಮಹಿಳೆಯರು.
ನವದಿನಗಳಲ್ಲಿ ಶಮೀವೃಕ್ಷವನ್ನು (ಬನ್ನಿ ಮರ) ಪೂಜಿಸಿದರೆ ಶತ್ರುಜಯ ಪಾಪ ಪರಿಹಾರ, ಮುಖ್ಯ ಕಾರ್ಯಗಳಲ್ಲಿ ವಿಜಯ, ಭಕ್ತರ ಮನೋಭೀಷ್ಟಗಳನ್ನು ಪೂರೈಸುತ್ತಾಳೆ ಎಂಬ ನಂಬಿಕೆಯಿಂದ ಮಹಿಳೆಯರು, ಪುರುಷರು ಸಹ ಪೂಜೆಯನ್ನು ಸಲ್ಲಿಸುತ್ತಾರೆ.
ವೃತ ನಿಯಮ
ಶಕ್ತಿದೇವತೆ ನಾನಾ ರೂಪಗಳಲ್ಲಿ ದರ್ಶನ ನೀಡುವಳು ಎಂದು ಭಕ್ತರು ನಂಬಿದ್ದಾರೆ. ಬನ್ನಿಮರ (ಶಮೀವೃಕ್ಷಕ್ಕೆ) ಪೂಜೆ ಸಲ್ಲಿಸುವುದರಿಂದ ಶತ್ರುಜಯ ಮತ್ತು ಪಾಪ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ.
ಮೊದಲ ದಿನ ನವದುರ್ಗೆಯರಿಗೆ ವಿಶೇಷ ಪೂಜೆ ಸಲ್ಲಿಸಿ ವಿವಾಹಿತ ಮಹಿಳೆಯರು ವಿಧವೆಯರು ಚಿಕ್ಕ ಮಕ್ಕಳು ಯಾವುದೇ ವಯಸ್ಸಿನ ಹಾಗೂ ಜಾತಿ ಧರ್ಮ ನಿರ್ಬಂಧವಿಲ್ಲದೆ ಆಚರಿಸುವ ಒಂದು ವಿಶೇಷ ಪೂಜೆ ಅಂದರೆ ಬನ್ನಿ ಮಹಾಕಾಳಿ ಪೂಜೆ ಮೊದಲ ದಿನ ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು ಸ್ನಾನ ಮಾಡಿ 9 ದಿನಗಳ ಆಚರಣೆ ಇರುವುದರಿಂದ ಒಂದೊಂದು ದಿನದ ಒಂದೊಂದು ಬಣ್ಣದ ಸೀರೆಗಳನ್ನು ತೊಟ್ಟು ಮನೆಯಿಂದ ಅಕ್ಕ ಪಕ್ಕದ ಮಹಿಳೆಯರು ಗುಂಪು ಗುಂಪಾಗಿ ಮೌನವಾಗಿ ಕೈಯಲ್ಲಿ ಆರತಿಯನ್ನು ಹಿಡಿದು ಶುದ್ಧ ಅರಳಿಯಿಂದ ಮಾಡಿದ ದಾರದಿಂದ ಬನ್ನಿ ಮರಕ್ಕೆ ಸುತ್ತಿ ಮಹಿಳೆಯರು ಮೌನವಾಗಿದ್ದು ದೇಗುಲದ ಆವರಣ ಹಾಗೂ ಬನ್ನಿಮರ ಇರುವ ಪ್ರದೇಶಕ್ಕೆ ಒಂಬತ್ತು ದಿನಗಳ ಕಾಲ ಬೆಳಗಿನ ಜಾವ ಮೂರು ಗಂಟೆಯಿಂದ ಐದು ಗಂಟೆಗೆ ಸಮಯ ಒಳಗೆ ಪೂಜೆ ಸಲ್ಲಿಸುತ್ತಾರೆ.

ತದನಂತರ ತಮ್ಮ ಗ್ರಾಮದ ಎಲ್ಲ ದೇವಸ್ಥಾನಗಳಿಗೆ ಹೋಗಿ ಎಣ್ಣೆ ನೈವೇದ್ಯ ಹಾಗೂ ಆರತಿಯನ್ನು ಎಲ್ಲ ದೇವರಿಗೆ ಅರ್ಪಿಸಿ ತಮ್ಮ ಇಷ್ಟಾರ್ಥಗಳನ್ನು ನೆನೆದು ಮನೆಗೆ ಬರುತ್ತಾರೆ 9 ದಿನಗಳವರೆಗೂ ಉಪವಾಸವನ್ನು ಮಾಡುತ್ತಾರೆ. ಸಂಜೆ ಸಮಯ ಗ್ರಾಮದೇವತೆ ದುರ್ಗಾ ದೇವಸ್ತಾನದಲ್ಲಿ ನವರಾತ್ರಿ ನಿಮಿತ್ತವಾಗಿ ಪೂಜ್ಯರಿಂದ ಪುರಾಣ ಪ್ರವಚನ ಕೊಲಾಟ ಇತ್ಯಾದಿ ಕಾರ್ಯಕ್ರಮಗಳು ಇರುತ್ತವೆ ಅದರಲ್ಲಿ ಭಾಗವಹಿಸಿ ಒಟ್ಟು ಒಂಬತ್ತು ದಿನಗಳು ಭಕ್ತಿಯ ಸಂಭ್ರಮದಿಂದ ಆಚರಣೆ ನಡೆಯುತ್ತದೆ.
ಬನ್ನಿ ಮಹಾಕಾಳಿ ಪೂಜಿಸುವ ಮಹಿಳೆಯರು ಮಾತನಾಡಿ ಹಲವು ವರ್ಷಗಳಿಂದ ಮಹಾಕಾಳಿಯನ್ನು ಪೂಜಿಸುತ್ತಿದ್ದು, ಎಲ್ಲದರಲ್ಲೂ ಸಂತೋಷ, ಶಾಂತಿ, ಸಂಪತ್ತು ಮತ್ತು ತೃಪ್ತಿಯನ್ನು ಕಂಡುಕೊಂಡಿದ್ದೇವೆ ಎಂದು ವಿವರಿಸಿದರು. ತಾಯಿಯ ಆಶೀರ್ವಾದ ಇರುವವರೆಗೆ, ಸಂತೋಷ, ಸಂಪತ್ತು ಮತ್ತು ಸಮೃದ್ಧಿಗಾಗಿ ಮನೆಯ ಸಹ ಪರಿಹಾರ ಶಾಂತಿ ನೆಮ್ಮದಿಗಾಗಿ ಪ್ರಾರ್ಥಿಸುತ್ತಲೇ ಇರುತ್ತಾರೆ ಎಂದು ಭಕ್ತಿ ಶೃದ್ದೆಯಿಂದ ಅವರು ಹೇಳಿದರು.












