ಬೈಲಹೊಂಗಲ: ಅಖಿಲ ಕರ್ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಸಮಿತಿ ವತಿಯಿಂದ ವರ್ಷ ಪದ್ಧತಿಯಂತೆ ಈ ವರ್ಷವು ಜ.26ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪುಣ್ಯಸ್ಮರಣೆ ಅಂಗವಾಗಿ ರಾಯಣ್ಣ ಹುತಾತ್ಮ ಸ್ಥಳ ನಂದಗಡದಿಂದ ಬೈಲಹೊಂಗಲದ ವೀರರಾಣಿ ಕಿತ್ತೂರು ಚನ್ನಮ್ಮನ ಲಿಂಗೈಕ್ಯ ಸಮಾಧಿ ಸ್ಥಳಕ್ಕೆ ತಂದು ಅರ್ಪಿಸುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪವಿತ್ರ ಆತ್ಮ ಜ್ಯೋತಿ ಯಾತ್ರೆಯನ್ನು ಜ.26ರಂದು ವಿಜೃಂಭಣೆಯಿಂದ ನೆರವೇರಿಸಲಾಗುವುದು ಎಂದು ಸ್ಮರಣೋತ್ಸವ ಸಮಿತಿ ಸಂಸ್ಥಾಪಕ ಅಧ್ಯಕ್ಷ ಸಿ.ಕೆ.ಮೆಕ್ಕೇದ ಹೇಳಿದರು.
ನಗರದ ಸಂಗಮ ಚಿತ್ರ ಮಂದಿರದಲ್ಲಿ ಅಖಿಲ ಕರ್ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಸಮಿತಿ ವತಿಯಿಂದ ಜ.26ರಂದು ನಡೆಯಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ 27ನೇ ವರ್ಷದ ಆತ್ಮಜ್ಯೋತಿ ಯಾತ್ರೆಯ ಪೂರ್ವಭಾವಿ ಸಭೆ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಜ.26ರಂದು ಬೆಳಗ್ಗೆ 8ಕ್ಕೆ ಶಿವಬಸವ ಕಲ್ಯಾಣ ಮಂಟಪದಲ್ಲಿ ಸೇರಿ ನಂದಗಡಕ್ಕೆ ತೆರಳಲಾಗುವುದು. ಸಂಜೆ 4ಕ್ಕೆ ಬೈಲಹೊಂಗಲಕ್ಕೆ ಬರುವ ಜ್ಯೋತಿ ಯಾತ್ರೆಯಲ್ಲಿ ಎಲ್ಲ ಸಮಾಜ ಬಾಂಧವರು, ಎಲ್ಲ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಎಲ್ಲ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಅಧಿಕಾರಿ ವರ್ಗದವರು, ಸಮಾಜ ಬಾಂಧವರು ಪಾಲ್ಗೊಂಡು ಜ್ಯೋತಿ ಯಾತ್ರೆ ಯಶಸ್ವಿಗೊಳಿಸಬೇಕು ಎಂದರು.
ಸ್ಮರಣೋತ್ಸವ ಸಮಿತಿ ಗೌರವ ಅಧ್ಯಕ್ಷ ಕುಮಾರ ದೇಶನೂರ, ಅಧ್ಯಕ್ಷ ರಾಜು ಸೊಗಲ, ಉಪಾಧ್ಯಕ್ಷ ಸೋಮನಾಥ ಸೊಪ್ಪಿಮಠ ಮಾತನಾಡಿ, ಸತತ 27 ವರ್ಷಗಳಿಂದ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಸಮಿತಿ ವತಿಯಿಂದ ನಂದಗಡದಿಂದ ರಾಯಣ್ಣನ ಪವಿತ್ರ ಆತ್ಮಜ್ಯೋತಿ ತಂದು ಚನ್ನಮ್ಮನ ಲಿಂಗೈಕ್ಯ ಸಮಾಧಿ ಸ್ಥಳಕ್ಕೆ ಅರ್ಪಿಸುವ ಪವಿತ್ರ ಕಾರ್ಯ ನೆರವೇರಿಸಲಾಗುತ್ತಿದೆ. ಈ ಪುಣ್ಯ, ಪವಿತ್ರ ರಾಷ್ಟ್ರಾಭಿಮಾನದ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಭಾಗವಹಿಸಿ ರಾಷ್ಟ್ರಾಭಿಮಾನ ಮೈಗೂಡಿಸಿಕೊಳ್ಳಬೇಕು. ಮಕ್ಕಳಿಗೂ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ, ಕೊಡುಗೆ ತಿಳಿಸಿಕೊಡಬೇಕು. ಸಂಗೊಳ್ಳಿ ರಾಯಣ್ಣ, ಕಿತ್ತೂರು ಚನ್ನಮ್ಮ, ಅಮಟೂರು ಬಾಳಪ್ಪ ಸೇರಿದಂತೆ ಕಿತ್ತೂರು ಸಂಸ್ಥಾನದ ವೀರ ಕಲಿಗಳ ಶೌರ್ಯ, ಸಾಹಸ, ದೇಶಪ್ರೇಮ ಪರಿಚಯ ಮಾಡಿಕೊಡಬೇಕು ಎಂದರು.
ಇದೇ ವೇಳೆ ವೀರರಾಣಿ ಕಿತ್ತೂರು ಚನ್ನಮ್ಮ ಸ್ಮರಣೋತ್ಸವ ಸಮಿತಿಯ ನೂತನ ಸಂಚಾಲಕರಾಗಿ ಆಯ್ಕೆಯಾದ ಪತ್ರಕರ್ತ ರವಿಕುಮಾರ ಹುಲಕುಂದ ಅವರನ್ನು ಸತ್ಕರಿಸಲಾಯಿತು. ಮುಖಂಡ ವಿರುಪಾಕ್ಷ ವಾಲಿ, ವೈದ್ಯರಾದ ಡಾ.ಮಂಜುನಾಥ ಮುದಕನಗೌಡರ, ಡಾ.ಅಶೋಕ ದೊಡವಾಡ, ಡಾ.ರಾಜು ಬಡ್ಲಿ, ನಿಂಗಣ್ಣ ದೊಡಗೌಡರ, ಕುಮಾರ ದಳವಾಯಿ, ಮಹಾಂತೇಶ ಮರೆಕ್ಕನವರ, ಅರುಣ ಯಲಿಗಾರ, ಈರಣ್ಣಾ ವಾಸನ್ನವರ, ಬಸವರಾಜ ನರಟ್ಟಿ, ಅರುಣ ಯಲಿಗಾರ, ಚಂದ್ರಕಾಂತ ಹೈಬತ್ತಿ, ಸಂತೋಷ ಹುಣಶೀಕಟ್ಟಿ ಅನಿಸಿಕೆ ತಿಳಿಸಿದರು. ಅಶೋಕ ಭದ್ರಶೆಟ್ಟಿ, ರಾಜು ನರಸನ್ನವರ, ರಿತೇಶ ಪಾಟೀಲ, ಬಸವರಾಜ ಸರಾಯದ, ಈರಪ್ಪ ಕಾಡೇಶನವರ, ಬಸವರಾಜ ದೊಡಮನಿ, ಆದರ್ಶ ಗುಂಡಗವಿ, ಅನೇಕರು ಇದ್ದರು. ಪತ್ರಕರ್ತ ರವಿ ಹುಲಕುಂದ ನಿರೂಪಿಸಿದರು. ಸಿದ್ದಲಿಂಗ ಸಿದ್ದಯ್ಯನವರ ಸ್ವಾಗತಿಸಿದರು.











