Search
Close this search box.

ಸೈನಿಕ ಶಾಲೆ ಕೊಡಗಿನಲ್ಲಿ 2025-26ನೇ ಅಂತರ ನಿಲಯ ಸಾಲಿನ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭ

ವರದಿ : MH Prasad, ಸೈನಿಕ ಶಾಲೆ ಕೊಡಗು

ಕುಶಾಲನಗರ : ಸೈನಿಕ್ ಶಾಲೆ ಕೊಡಗಿನಲ್ಲಿ 2025-26ನೇ ಸಾಲಿನ ಅಂತರ ನಿಲಯ ವಾರ್ಷಿಕ ಕ್ರೀಡಾಕೂಟವು ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಸ್ತುತ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್ ರವರು ಆಗಮಿಸಿದ್ದರು.

ಇವರೊಂದಿಗೆ ಶಾಲೆಯ ಆಡಳಿತಾಧಿಕಾರಿಗಳಾದ ವಿಂಗ್ ಕಮಾಂಡರ್ ಪ್ರಕಾಶ್ ರಾವ್, ಉಪ ಪ್ರಾಂಶುಪಾಲ ಸ್ಕ್ವಾಡ್ರನ್ ಲೀಡರ್ ಮೊಹಮ್ಮದ್ ಶಾಜಿ, ಹಿರಿಯ ಶಿಕ್ಷಕರಾದ ಶ್ರೀ ವಿಬಿನ್ ಕುಮಾರ್, ಶ್ರೀಮತಿ ದಿವ್ಯಾ ಸಿಂಗ್, ಶ್ರೀಮತಿ ಶಾಲಿನಿ ರಾವ್ ಸೇರಿದಂತೆ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿವರ್ಗದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಎರಡು ದಿನಗಳವರೆಗೆ ನಡೆದ ಈ ಕ್ರೀಡಾಕೂಟದಲ್ಲಿ ಹಲವಾರು ವಿಭಾಗಗಳಿದ್ದು, ಎಲ್ಲಾ ಸ್ಪರ್ಧೆಗಳಲ್ಲಿಯೂ ವಿದ್ಯಾರ್ಥಿಗಳು ಕ್ರೀಡಾಮನೋಭಾವ ಹಾಗೂ ಸಮನ್ವಯತೆಯಿಂದ ಪಾಲ್ಗೊಂಡು ಕ್ರೀಡಾಕೂಟದ ಯಶಸ್ಸಿಗೆ ಸಾಕ್ಷಿಯಾದರು.

ಕಾರ್ಯಕ್ರಮದಲ್ಲಿ ಕೆಡೆಟ್ ಶ್ರೇಯ ಅವರ ಸ್ವಾಗತ ಭಾಷಣದೊಂದಿಗೆ ಆರಂಭಗೊಂಡಿತು. 50 ಮೀಟರ್ ಹಾಗೂ 100 ಮೀಟರ್ ಮಕ್ಕಳ ಓಟದ ಸ್ಪರ್ಧೆಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು. ಇದರೊಂದಿಗೆ ಶಾಲೆಯ ಹನ್ನೊಂದನೇ ತರಗತಿ ಹಾಗೂ ಸಿಬ್ಬಂದಿವರ್ಗದವರೊಡನೆ ನಡೆದ ಹಗ್ಗಜಗ್ಗಾಟ ಸ್ಪರ್ಧೆಯು ರೋಚಕ ಹೋರಾಟದೊಂದಿಗೆ ಕೊನೆಗೊಂಡು ಅಂತಿಮವಾಗಿ ವಿದ್ಯಾರ್ಥಿಗಳ ತಂಡವು ಜಯಗಳಿಸಿತು. ಹಾಗೆಯೇ ಮಹಿಳೆಯರಿಗಾಗಿ ನಿಂಬೆಹಣ್ಣು ಮತ್ತು ಚಮಚದೊಂದಿಗಿನ ಚಲನೆಯ ಸ್ಪರ್ಧೆಯನ್ನೂ ಸಹ ಹಮ್ಮಿಕೊಳ್ಳಲಾಗಿತ್ತು.

ಕ್ರೀಡಾಕೂಟದ ಹಲವಾರು ವಿಭಾಗಗಳಲ್ಲಿ ಅದ್ಭುತ ಸಾಧನೆಗೈದ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿಪತ್ರ ಹಾಗೂ ಪಾರಿತೋಷಕದೊಂದಿಗೆ ಗೌರವಿಸಲಾಯಿತು. ಹಿರಿಯರ ಬಾಲಕರ ವಿಭಾಗದಲ್ಲಿ ಸುಬ್ರೋತೋ ನಿಲಯದ ಕೆಡೆಟ್ ಪ್ರಮೋದ್ ಹಾಗೂ ಅದೇ ನಿಲಯದ ಕಿರಿಯರ ವಿಭಾಗದ ಕೆಡೆಟ್ ಲಾಲಿತ್ಯ, ಬಾಲಕಿಯರ ಹಿರಿಯರ ವಿಭಾಗದಿಂದ ಸುಬ್ರತೋ ನಿಲಯದ ಕೆಡೆಟ್ ದೀಪ್ತಿದೇವಿ ಹಾಗೂ ಕಿರಿಯ ಬಾಲಕಿಯರ ವಿಭಾಗದಿಂದ ಕಟಾರಿ ಕಿರಿಯರ ನಿಲಯದ ಕೆಡೆಟ್ ಕನಿಷ್ಕಾ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿಗೆ ಭಾಜನರಾದರು. ಎಲ್ಲಾ ವಿಭಾಗಗಳಲ್ಲಿ ಸ್ಮರಣೀಯವಾದ ಸಾಧನೆಗೈದ ಶಾಲೆಯ ಸುಬ್ರತೋ ನಿಲಯವನ್ನು 2025ನೇ ಸಾಲಿನ ಕ್ರೀಡಾಕೂಟದ ಚಾಂಪಿಯನ್ ನಿಲಯವನ್ನಾಗಿ. ಕ್ರೀಡಾಕೂಟದ ಎಲ್ಲಾ ಸ್ಪರ್ಧೆಗಳಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಸುಬ್ರೋತೋ ನಿಲಯವನ್ನು ಚಾಂಪಿಯನ್ ನಿಲಯವೆಂದು ಘೋಷಿಸಿ ಪಾರಿತೋಷಕವನ್ನು ಪ್ರದಾನ ಮಾಡಲಾಯಿತು.

ನಂತರ ಶಾಲೆಯ ವಿದ್ಯಾರ್ಥಿಗಳು ಸಮಾರೋಪ ಸಮಾರಂಭದ ಪಥಸಂಚಲನವನ್ನು ಮನೋಜ್ಞವಾಗಿ ನಡೆಸಿಕೊಟ್ಟು ನೋಡುಗರ ಗಮನಸೆಳೆದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಅತಿಥಿಗಳು ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ತೋರಿದ ಉನ್ನತ ಮಟ್ಟದ ಕ್ರೀಡಾಸ್ಪೂರ್ತಿ, ಶಿಸ್ತು ಮತ್ತು ನಿಷ್ಠೆಯನ್ನು ಪ್ರಶಂಸಿಸಿದರು. ಕ್ರೀಡೆಗಳು ವ್ಯಕ್ತಿತ್ವ ನಿರ್ಮಾಣ, ನಾಯಕತ್ವ ಗುಣಗಳ ಅಭಿವೃದ್ಧಿ ಮತ್ತು ದೈಹಿಕ ಸಹನಶೀಲತೆಗೆ ಮಹತ್ವದ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು. ಜೊತೆಗೆ ಕ್ರೀಡಾಕೂಟದ ಆಯೋಜಕರು, ಅಧಿಕಾರಿಗಳು ಮತ್ತು ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳ ಶ್ರಮವನ್ನು ಶ್ಲಾಘಿಸಿ, ಕ್ರೀಡಾಕೂಟದುದ್ದಕ್ಕೂ ಸುರಕ್ಷತೆ ಮತ್ತು ನ್ಯಾಯಸಮ್ಮತ ಆಟಕ್ಕೆ ಆದ್ಯತೆ ನೀಡಲಾಗಿತ್ತು ಎಂದು ಹೇಳಿದರು.

ಕ್ರೀಡಾಕೂಟದ ಸಮಾರೋಪ ಸಮಾರಂಭದ ಸಂಕೇತವಾಗಿ ರಾಷ್ಟ್ರಧ್ವಜವನ್ನು ಪ್ರಾಂಶುಪಾಲರಿಗೆ ಔಪಚಾರಿಕವಾಗಿ ಹಸ್ತಾಂತರಿಸಲಾಯಿತು. ಸಮಾರೋಪ ಸಮಾರಂಭದ ಅಂತ್ಯದಲ್ಲಿ ಮುಖ್ಯ ಅತಿಥಿಗಳು 2025-26ನೇ ಸಾಲಿನ ಅಂತರ ನಿಲಯ ವಾರ್ಷಿಕ ಕ್ರೀಡಾಕೂಟವು ಅಧಿಕೃತವಾಗಿ ಮುಕ್ತಾಯಗೊಂಡಿದೆ ಎಂದು ಘೋಷಿಸಿದರು. ಕಾರ್ಯಕ್ರಮದ ಅಂತ್ಯದಲ್ಲಿ ಕೆಡೆಟ್ ಮಯೂಕ ವಂದನಾರ್ಪಣೆ ಸಲ್ಲಿಸಿದರು.

Leave a Comment

error: Content is protected !!