ವರದಿ : ಎಚ್ ಎಮ್ ಪ್ರಸಾದ್
ಕುಶಾಲನಗರ ಡಿ 12: ಸೈನಿಕ ಶಾಲೆ ಕೊಡಗು ತನ್ನ ಬಹುನಿರೀಕ್ಷಿತ 2025-26ನೇ ವಾರ್ಷಿಕ ಕ್ರೀಡಾಕೂಟವನ್ನು ಶಾಲೆಯ ಮರಿಯಪ್ಪ ಕೆಂಪಯ್ಯ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಅತ್ಯಂತ ಉತ್ಸಾಹ, ಶಿಸ್ತು ಹಾಗೂ ಕ್ರೀಡಾ ಮನೋಭಾವದೊಂದಿಗೆ ಉದ್ಘಾಟಿಸಲ್ಪಟ್ಟಿತು. ಪ್ರಸ್ತುತ ಕ್ರೀಡಾಕೂಟದ ಉದ್ಘಾಟನಾ ಸಮಾರಂಭಕ್ಕೆ ಶಾಲೆಯ ಮಾಜಿ ಪ್ರಾಂಶುಪಾಲರಾದ ನಿವೃತ್ತ ಕಮೋಡೋರ್ ಎಂ ಟಿ ರಮೇಶ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಕೆಡೆಟ್ ವೈಷ್ಣವಿ ದಾಸನಕೊಪ್ಪ ಅವರ ಸ್ವಾಗತ ಭಾಷಣದೊಂದಿಗೆ ಆರಂಭಗೊಂಡಿತು. ಇವರೊಂದಿಗೆ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್, ಕ್ಯಾಪ್ಟನ್ ಯೋಗೇಶ, ಆಡಳಿತಾಧಿಕಾರಿಗಳಾದ ವಿಂಗ್ ಕಮಾಂಡರ್ ಪ್ರಕಾಶ್ ರಾವ್, ಉಪ ಪ್ರಾಂಶುಪಾಲರಾದ ಸ್ಕ್ವಾಡ್ರನ್ ಲೀಡರ್ ಮೊಹಮ್ಮದ್ ಷಾಜಿ ಹಾಗೂ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಕಾರ್ಯಕ್ರಮದ ಮೊದಲಿಗೆ ವಿದ್ಯಾರ್ಥಿಗಳು ಶಿಸ್ತುಬದ್ಧವಾದ ಹಾಗೂ ಮನೋಜ್ಞವಾದ ಪಥಸಂಚಲನವನ್ನು ನಡೆಸಿಕೊಟ್ಟರು. ಇದರೊಂದಿಗೆ ಶಾಲೆಯ ಕ್ರೀಡಾ ಉಪ ನಾಯಕನಾದ ಕೆಡೆಟ್ ಸೋಹಮ್ ನಿಷ್ಪಕ್ಷಪಾತವಾಗಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವಿಕೆಯೊಂದಿಗೆ, ಶಾಲಾ ಧ್ಯೇಯ ವಾಕ್ಯವಾದ ವೀರತೆ, ಧೃಡತೆ ಹಾಗೂ ಪ್ರಾಮಾಣಿಕತೆಯನ್ನು ಉನ್ನತ ಹಂತಕ್ಕೆ ಕೊಂಡೊಯ್ಯುವ ಕುರಿತು ಎಲ್ಲ ತಂಡಗಳ ನಾಯಕರುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳು ಅಧಿಕೃತವಾಗಿ ಕ್ರೀಡಾಕೂಟವನ್ನು ಉದ್ಘಾಟಿಸುವುದರೊಂದಿಗೆ ಕ್ರೀಡಾಕೂಟದ ಸಂಕೇತವಾಗಿ ಪಾರಿವಾಳಗಳನ್ನು ಹಾರಿಸಿದರು.

ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿಗಳಾದ ಕಮೋಡೋರ್ ಎಂ ಟಿ ರಾಮೇಶ್ ರವರು ಶಾಲೆಯು ಕ್ರೀಡೆ ಮತ್ತು ಪಾಠ್ಯೇತರ ಚಟುವಟಿಕೆಗಳಲ್ಲಿನ ನಿರಂತರ ಸಾಧನೆಗಾಗಿ ಶಾಲೆಯನ್ನು ಅಭಿನಂದಿಸಿದರು. ಜೊತೆಗೆ ವಿದ್ಯಾರ್ಥಿಗಳು ಶಾಲೆಯ ಧ್ಯೇಯ ವಾಕ್ಯವಾದ ವೀರತೆ, ಧೃಡತೆ ಹಾಗೂ ಪ್ರಾಮಾಣಿಕತೆಯನ್ನು ಸದಾ ಪಾಲಿಸುವುದರೊಂದಿಗೆ, ಕ್ರೀಡಾ ಮೈದಾನದ ಒಳಗೂ ಹಾಗೂ ಹೊರಗೂ ಶಿಸ್ತಿನಿಂದ ನಡೆದುಕೊಳ್ಳಬೇಕೆಂಬ ಸಂದೇಶ ನೀಡಿದರು.
ಮುಂದುವರಿದಂತೆ ಅವರು ತಮ್ಮ ಪ್ರೇರಣಾದಾಯಕ ಭಾಷಣದಲ್ಲಿ ನ್ಯಾಯಯುತ ಆಟ, ಶಿಸ್ತು ಮತ್ತು ಪರಿಶ್ರಮ ಇವುಗಳ ಮಹತ್ವವನ್ನು ಕುರಿತು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಇಂತಹ ಗುಣಗಳು ಭವಿಷ್ಯದ ಉತ್ತಮ ನಾಯಕರನ್ನು ರೂಪಿಸುವಲ್ಲಿ ನೆರವಾಗುತ್ತವೆ ಎಂದರು. ಎಲ್ಲಾ ಸ್ಪರ್ಧಿಗಳು ಆತ್ಮವಿಶ್ವಾಸದಿಂದ ಪಾಲ್ಗೊಳ್ಳುವುದರೊಂದಿಗೆ ಸುರಕ್ಷತೆ, ತಂಡಮನೋಭಾವ ಹಾಗೂ ಪರಸ್ಪರ ಗೌರವವನ್ನು ಕಾಪಾಡಿಕೊಳ್ಳಲು ಸೂಚಿಸಿದರು.
ಪ್ರಸ್ತುತ ಶಾಲೆಯಲ್ಲಿ ತಮ್ಮ ಸೇವಾ ಅವಧಿಯ ದಿನಗಳನ್ನು ನೆನಪಿಸಿಕೊಳ್ಳುವುದರೊಂದಿಗೆ ಶಾಲೆಯು ಶೈಕ್ಷಣಿಕ ಸಾಧನೆಗಳಲ್ಲಿ ಹಾಗೂ ಮೂಲಭೂತ ಸೌಕರ್ಯಗಳ ಬೆಳವಣಿಗೆಯಲ್ಲಿ ಕಂಡುಬಂದ ಗಣನೀಯ ಪ್ರಗತಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ವಿದ್ಯಾರ್ಥಿಗಳು ಶಾಲೆಯ ಬೆಳವಣಿಗೆಯ ಕುರಿತು ಹೆಮ್ಮೆ ಪಡುವುದರೊಂದಿಗೆ ಮತ್ತು ಇನ್ನಷ್ಟು ಸಾಧನೆಯ ಶಿಖರವನ್ನೇರಲು ನಿರಂತರ ಪ್ರಯತ್ನಿಸಬೇಕೆಂದು ಪ್ರೇರೇಪಿಸಿದರು. ಪ್ರಸ್ತುತ ಕ್ರೀಡಾಕೂಟವು ನಾಳೆ ಅಂದರೆ ಶನಿವಾರದಂದು ಸಂಪನ್ನಗೊಳ್ಳಲಿದೆ.



