ಇಟಗಿ ಕ್ರಾಸ್–ಇಟಗಿ ಗ್ರಾಮ ಸಂಪರ್ಕ ರಸ್ತೆ ಡಾಂಬರೀಕರಣಕ್ಕೆ ₹6 ಕೋಟಿ ಅನುದಾನ; ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ
ಕಿತ್ತೂರು: ಕಿತ್ತೂರು ಮತಕ್ಷೇತ್ರದ ಇಟಗಿ ಕ್ರಾಸ್ನಿಂದ ಇಟಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಡಾಂಬರೀಕರಣ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯಿಂದ ₹6 ಕೋಟಿ ಅನುದಾನ ಮಂಜೂರಾಗಿದ್ದು, ಕಿತ್ತೂರಿನ ಜನಪ್ರಿಯ ಶಾಸಕ ಬಾಬಾಸಾಹೇಬ ಪಾಟೀಲ ಅವರು ಸುಸಜ್ಜಿತ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಾಬಾಸಾಹೇಬ ಪಾಟೀಲ ಅವರು, ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರ ವಿಶೇಷ ಪ್ರಯತ್ನದಿಂದ ಕಿತ್ತೂರು ಮತಕ್ಷೇತ್ರದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆಯಾಗುತ್ತಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ನನ್ನ ಶಕ್ತಿಮೀರಿ ಶ್ರಮಿಸುತ್ತಿದ್ದೇನೆ ಎಂದು ತಿಳಿಸಿದರು.
ಇಟಗಿ ಕ್ರಾಸ್–ಇಟಗಿ ಗ್ರಾಮ ಸಂಪರ್ಕ ರಸ್ತೆ ಖಾನಾಪುರ ತಾಲೂಕಿನ ವಿವಿಧ ಹಳ್ಳಿಗಳ ಜನರಿಗೆ, ಅದರಲ್ಲೂ ವಿಶೇಷವಾಗಿ ರೈತರು ಕಬ್ಬನ್ನು ಸಕ್ಕರೆ ಕಾರ್ಖಾನೆಗಳಿಗೆ ಸಾಗಿಸಲು ಅತ್ಯಂತ ಅವಶ್ಯಕವಾಗಿದೆ. ಈ ರಸ್ತೆಯ ಮಹತ್ವವನ್ನು ಮನಗಂಡು ಡಾಂಬರೀಕರಣಕ್ಕಾಗಿ ವಿಶೇಷ ಅನುದಾನ ಬಿಡುಗಡೆಗೊಳಿಸಲಾಗಿದೆ. ಇದರಿಂದ ಈ ಭಾಗದ ಜನರ ಸಂಚಾರಕ್ಕೆ ಅನುಕೂಲವಾಗುವುದರ ಜೊತೆಗೆ ರೈತರ ಕೃಷಿ ಚಟುವಟಿಕೆಗಳಿಗೂ ನೆರವಾಗಲಿದೆ ಎಂದರು.
ಅದೇ ರೀತಿ ಪಾರಿಷ್ವಾಡ್–ಎಂ.ಕೆ. ಹುಬ್ಬಳ್ಳಿ ರಸ್ತೆಯ ಅಭಿವೃದ್ಧಿ ಕಾಮಗಾರಿಯನ್ನೂ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ರಸ್ತೆಯ ಡಾಂಬರೀಕರಣಕ್ಕೆ ಒಂದು ವರ್ಷದ ಹಿಂದೆಯೇ ಹಣ ಮಂಜೂರಾಗಿದ್ದರೂ, ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧಗಳಿಂದ ಡಾಂಬರ್ ಬೆಲೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಕಾಮಗಾರಿ ಕೈಗೆತ್ತಿಕೊಳ್ಳಲು ಮುಂದೆ ಬಾರದ ಕಾರಣ ವಿಳಂಬವಾಗಿದೆ ಎಂದು ವಿವರಿಸಿದರು.
ರಸ್ತೆ ನಿರ್ಮಾಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ
ಸುಸಜ್ಜಿತ ರಸ್ತೆ ನಿರ್ಮಾಣವಾಗಲು ಗುತ್ತಿಗೆದಾರರೊಂದಿಗೆ ಈ ಭಾಗದ ಜನರು ಸಹಕರಿಸಬೇಕು. ಕಾಮಗಾರಿ ಸುಗಮವಾಗಿ ನಡೆಯಲು ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
“ನಾನು ದೇವರಲ್ಲ; ದೇವರು ಕೂಡ ಎಲ್ಲರಿಗೂ ಎಲ್ಲವನ್ನೂ ಕೊಡಲು ಸಾಧ್ಯವಿಲ್ಲ. ನನ್ನ ಮತದಾರರಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ನನ್ನ ಶಕ್ತಿಮೀರಿ ಪ್ರಯತ್ನಿಸುತ್ತಿದ್ದೇನೆ” ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ನಮ್ಮ ವಾಹಿನಿಯೊಂದಿಗೆ ಮಾತನಾಡಿದ ಅವರು, ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ನಮ್ಮ ಎಲ್ಲ ಮನವಿಗಳಿಗೆ ಸ್ಪಂದಿಸುತ್ತಿದ್ದು, ಅವರ ಸಹಕಾರದಿಂದ ಕಿತ್ತೂರು ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರಲು ಸಾಧ್ಯವಾಗಿದೆ. ಕಿತ್ತೂರು ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿಸುವುದು ನನ್ನ ಗುರಿಯಾಗಿದೆ. ಈ ಗುರಿ ಸಾಧನೆಗೆ ಕ್ಷೇತ್ರದ ಎಲ್ಲ ನಾಗರಿಕರು ನನ್ನೊಂದಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಗಣ್ಯರ ಉಪಸ್ಥಿತಿ
ಈ ಸಂದರ್ಭದಲ್ಲಿ ಮುಖಂಡರಾದ ಸಂಗನಗೌಡ ಪಾಟೀಲ, ಶಿವಯೋಗಿ ದೊಡ್ಡಮನಿ, ಮುದುಕಪ್ಪ ಮರಡಿ, ಲಕ್ಷ್ಮಣ ಪಾಟೀಲ, ಶ್ರೀಶೈಲ ತುರಮರಿ, ಇಕ್ಬಾಲ್ ನದಾಫ್, ಆನಂದ ಪಟೇ, ಕಿರಣ್ ಮೂಲಿಮನಿ, ಸಾಗರ ದೇಸಾಯಿ, ಗಡಿನಾಡು ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಬಸವರಾಜ ಬಂಗಿ, ಬಾಹುಬಲಿ ಕಡಬಿ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಗುತ್ತಿಗೆದಾರರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮಡಿವಾಳಯ್ಯ ಸುತಗಟ್ಟಿ ಕಾರ್ಯಕ್ರಮ ನಿರೂಪಿಸಿದರು.
ವರದಿ : ಎಂ ಎಂ ರಾಜಾಬಾಯಿ
ಸಮಯವಾಣಿ ನ್ಯೂಸ್ & ಗಡಿನಾಡು ಸಮಾಚಾರ
www.samayavani.com

