ಚನ್ನಮ್ಮನ ಕಿತ್ತೂರು : 202ನೇ ಕಿತ್ತೂರು ಚೆನ್ನಮ್ಮ ಉತ್ಸವದ ಅಂಗವಾಗಿ ಈ ಬಾರಿ ಮಹಿಳೆಯರಿಗಾಗಿ ವಿಶೇಷ ರಾಣಿ ಚೆನ್ನಮ್ಮ ಮಹಿಳಾ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದ್ದು, ರಂಗೋಲಿ, ಕ್ರೀಡಾಕೂಟ, ಬೈಕ್ ರ್ಯಾಲಿ, ವಿಚಾರ ಸಂಕಿರಣ ಹಾಗೂ ಚರ್ಚಾ ಸ್ಪರ್ಧೆ ಆಯೋಜನೆ ಇನ್ನೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸವದತ್ತಿ ಯಲ್ಲಮ್ಮ ಪ್ರಾಧಿಕಾರದ ಆಯುಕ್ತೆ ಪ್ರಭಾವತಿ ಪಕ್ಕೀರಪುರ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಿತ್ತೂರಿನ ವಿವಿಧ ಸಂಘಟನೆಗಳ ಮಹಿಳಾ ಮುಖಂಡರು ಹಾಗೂ ಸದಸ್ಯರು ಭಾಗವಹಿಸಿ, ಮಹಿಳಾ ಉತ್ಸವವನ್ನು ಯಶಸ್ವಿಗೊಳಿಸುವ ಕುರಿತು ಚರ್ಚಿಸಿದರು.

ಪಕ್ಷಾತೀತವಾಗಿ ಉತ್ಸವ ಆಚರಣೆಗೆ ಕರೆ
ಕೆಪಿಸಿಸಿ ಸದಸ್ಯೆ ರೋಹಿಣಿ ಬಾಬಾಸಾಹೇಬ ಪಾಟೀಲ ಮಾತನಾಡಿ “ಕನ್ನಡ ನಾಡಿನ ಕನಕದಲ್ಲಿ, ನಾಡವರ ನುಡಿಯಲಿ ಈ ಮಣ್ಣಿನ ನೆಲದಲ್ಲಿ, ನಡೆದಾಡಿದ ನಡತಿ ನೀ, ಕಿತ್ತೂರಿನ ಕೀರ್ತಿ ಇದೋ; ಶರಣು ನಿನಗೆ ಸಾವಿರ ಸಾರಿ ಅಂತ ತಾಯಿ! ವೀರರಾಣಿ ಕಿತ್ತೂರು ಚೆನ್ನಮ್ಮಾಜಿಗೆ ಶತ ಶತ ನಮನಗಳು” ಎಂದು ಸ್ಮರಿಸಿದರು.
ವೀರರಾಣಿ ಕಿತ್ತೂರು ಚೆನ್ನಮ್ಮಾಜಿ ಅವರು ಈ ನಾಡಿನ ಮನೆಮಗಳಂತಿರುವ ತಾಯಿ. ಅವರ ಉತ್ಸವವನ್ನು ಪಕ್ಷ, ಜಾತಿ ಹಾಗೂ ಯಾವುದೇ ಭೇದಭಾವವಿಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ಅದ್ಧೂರಿಯಾಗಿ ಆಚರಿಸಬೇಕು. ಈ ನಿಟ್ಟಿನಲ್ಲಿ ಮಹಿಳೆಯರು ಒಗ್ಗಟ್ಟಿನಿಂದ ಉತ್ಸವವನ್ನು ಆಚರಿಸುವ ನಿರ್ಧಾರ ಕೈಗೊಂಡಿರುವುದು ಸಂತಸದ ಸಂಗತಿಯಾಗಿದೆ ಎಂದು ಹೇಳಿದರು.
ರಾಣಿ ಚೆನ್ನಮ್ಮಾಜಿ ಅವರ ಧೈರ್ಯ, ಶೌರ್ಯ ಮತ್ತು ಹೋರಾಟದ ಆದರ್ಶಗಳನ್ನು ಇಂದಿನ ಮಹಿಳೆಯರೂ ಮೈಗೂಡಿಸಿಕೊಳ್ಳಬೇಕು. ಕಿತ್ತೂರು ಹಾಗೂ ಸುತ್ತಮುತ್ತಲಿನ ಎಲ್ಲ ಮಹಿಳೆಯರು ಉತ್ಸವದಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.
ಈ ಬಾರಿಯ 202ನೇ ಕಿತ್ತೂರು ಚೆನ್ನಮ್ಮ ಉತ್ಸವವನ್ನು ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಮಹಿಳೆಯರಿಗಾಗಿ ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬೈಕ್ ರ್ಯಾಲಿ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಸವದ ಯಶಸ್ಸಿಗೆ ಕೈಜೋಡಿಸಬೇಕು ಎಂದು ರೋಹಿಣಿ ಬಾಬಾಸಾಹೇಬ ಪಾಟೀಲ ಕರೆ ನೀಡಿದರು.
ವಿವಿಧ ಕಾರ್ಯಕ್ರಮಗಳ ವಿವರ
ತದನಂತರ ಮಾತನಾಡಿದ ಸವದತ್ತಿ ಯಲ್ಲಮ್ಮ ಪ್ರಾಧಿಕಾರದ ಆಯುಕ್ತೆ ಪ್ರಭಾವತಿ ಪಕ್ಕೀರಪುರ, ಮಹಿಳಾ ಉತ್ಸವದ ಅಂಗವಾಗಿ ಹಲವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಅಕ್ಟೋಬರ್ 17ರಂದು ಬೆಳಗ್ಗೆ 7 ಗಂಟೆಗೆ ಲಿಂಗಪೂಜೆಯ ಮೂಲಕ ಮಹಿಳಾ ಉತ್ಸವಕ್ಕೆ ಚಾಲನೆ ನೀಡಲಾಗುವುದು. ಅದೇ ದಿನ ಸಂಜೆ 5ರಿಂದ ರಾತ್ರಿ 8 ಗಂಟೆಯವರೆಗೆ ನವರಾತ್ರಿ ಅಂಗವಾಗಿ ಮಹಿಳೆಯರಿಗಾಗಿ ‘ದಾಂಡಿಯಾ ಧಮಾಲ್’ ಕಾರ್ಯಕ್ರಮ ನಡೆಯಲಿದೆ.
ಅಕ್ಟೋಬರ್ 21ರಂದು ಮನೆ ಮನೆ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದ್ದು, ಕಿತ್ತೂರು ಪಟ್ಟಣದ ಸಮಸ್ತ ಮಹಿಳೆಯರು ಭಾಗವಹಿಸುವಂತೆ ಮನವಿ ಮಾಡಲಾಗಿದೆ. ಉತ್ತಮ ರಂಗೋಲಿಗಳಿಗೆ ಪ್ರಶಸ್ತಿಗಳನ್ನು ನೀಡಲಾಗುವುದು.
ಅಕ್ಟೋಬರ್ 22ರಂದು ಬೆಳಗ್ಗೆ 7 ಗಂಟೆಗೆ ಮಹಿಳೆಯರ ಬೈಕ್ ರ್ಯಾಲಿ ನಡೆಯಲಿದ್ದು, ಹುಲಿಕಟ್ಟಿ ಪ್ರದೇಶದಿಂದ ಆರಂಭವಾಗುವ ರ್ಯಾಲಿಯು ಡೊಂಬರಕೊಪ್ಪ ಐಬಿ ವರೆಗೆ ಸಾಗಲಿದೆ. ಕಿತ್ತೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.
ಇದರ ಜೊತೆಗೆ ಅಕ್ಟೋಬರ್ 24ರಂದು ವಿಚಾರ ಸಂಕಿರಣ, ಕ್ರೀಡಾ ಕಾರ್ಯಕ್ರಮಗಳು ಹಾಗೂ ಚರ್ಚಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಹಿಳಾ ಉತ್ಸವವನ್ನು ಯಶಸ್ವಿಗೊಳಿಸುವಂತೆ ಆಯುಕ್ತೆ ಪ್ರಭಾವತಿ ಪಕ್ಕೀರಪುರ ಮನವಿ ಮಾಡಿದರು. ಈ ಬಾರಿ ಮಹಿಳಾ ಉತ್ಸವವನ್ನು ಅತ್ಯಂತ ಯಶಸ್ವಿಯಾಗಿ ಹಾಗೂ ವಿಜೃಂಭಣೆಯಿಂದ ಆಚರಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಮಹಿಳಾ ಮುಖಂಡರ ಉಪಸ್ಥಿತಿ ಸಭೆಯಲ್ಲಿ ಕೆಪಿಸಿಸಿ ಸದಸ್ಯೆ ರೋಹಿಣಿ ಬಾಬಾಸಾಹೇಬ ಪಾಟೀಲ, ಸವದತ್ತಿ ಯಲ್ಲಮ್ಮ ಪ್ರಾಧಿಕಾರದ ಆಯುಕ್ತೆ ಪ್ರಭಾವತಿ ಪಕ್ಕೀರಪುರ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸಮ್ರೀನ್ ಬಾನು ಸುತಗಟ್ಟಿ, ಸದಸ್ಯೆ ಶಾರದಾ ಜಕ್ಕಣ್ಣವರ, ಮಹಿಳಾ ಮುಖಂಡರಾದ ದೀನಾ ಫೈರೋಜ್ ಅಹ್ಮದ್ ಲಂಗೋಟಿ, ಸುಜಾತಾ ಜಕಾತಿ ಸೇರಿದಂತೆ ಕಿತ್ತೂರಿನ ವಿವಿಧ ಸಂಘಟನೆಗಳ ಮಹಿಳಾ ಮುಖಂಡರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

