ಚನ್ನಮ್ಮನ ಕಿತ್ತೂರು (ಸಮಯವಾಣಿ ನ್ಯೂಸ್ ಡೆಸ್ಕ) : ತಾಲೂಕಿನ ಹಿರೇನಂದಿಹಳ್ಳಿ ಗ್ರಾಮದಲ್ಲಿ ದಿನಾಂಕ 31-08-2026 ರಂದು ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು.
ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆಯನ್ನು ತಲುಪಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಈ ಶಿಬಿರದಲ್ಲಿ ಹಿರೇನಂದಿಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನೂರಾರು ಜನರು ಅತ್ಯಂತ ಆಸಕ್ತಿಯಿಂದ ಭಾಗವಹಿಸಿ ಉಚಿತ ಆರೋಗ್ಯ ತಪಾಸಣೆಯ ಸದುಪಯೋಗ ಪಡೆದುಕೊಂಡರು.
ಶಿಬಿರದಲ್ಲಿ ಎಕ್ಸ್-ರೇ ತಪಾಸಣೆ, ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ (DM/HTN) ತಪಾಸಣೆ, ಹಳೆಯ ಕ್ಷಯರೋಗ (TB) ತಪಾಸಣೆ, ಕ್ಯಾನ್ಸರ್ ಸಂಬಂಧಿತ ಪ್ರಾಥಮಿಕ ತಪಾಸಣೆ, ಕಡಿಮೆ ರಕ್ತದೊತ್ತಡ ಹಾಗೂ ತೂಕ ಇಳಿಕೆಯಂತಹ ಆರೋಗ್ಯ ಸಮಸ್ಯೆಗಳ ಕುರಿತು ಪರೀಕ್ಷೆ ನಡೆಸಲಾಯಿತು. ಅಗತ್ಯವಿರುವ ಸಾರ್ವಜನಿಕರಿಗೆ ವೈದ್ಯಕೀಯ ಸಲಹೆ, ಮಾರ್ಗದರ್ಶನ ಹಾಗೂ ಉಚಿತ ಔಷಧಿಗಳನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆಯಿಂದ ಆಗಮಿಸಿದ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಾದ ವಿನಾಯಕ ಎಂ. ಕಾಮಕರ, ಎಸ್ಟಿಎಸ್ ಕಿತ್ತೂರು ಕ್ಷಯರೋಗ ಮೇಲ್ವಿಚಾರಕರು, ಗುರುಪಾದ ವೇದಾರ, ಜಿಲ್ಲಾ ಟಿಬಿ ಕಾರ್ಯಕ್ರಮ ಸಂಯೋಜಕರು, ರಾಕೇಶ್ ಮರಿಗೇರಿ, ಕಮ್ಯುನಿಟಿ ಮೊಬಿಲೈಸರ್, ಮಮತಾ ವಡ್ಡರ್, ಕಮ್ಯುನಿಟಿ ಹೆಲ್ತ್ ಆಫೀಸರ್, ಸಂತೋಷ್ ಬಿರ್ದಾರ್, ಕಮ್ಯುನಿಟಿ ಹೆಲ್ತ್ ಆಫೀಸರ್ ಹಾಗೂ ತಾಜಿಲಾ ಬಾಗೇವಾಡಿ, ಕಮ್ಯುನಿಟಿ ಹೆಲ್ತ್ ಆಫೀಸರ್ ಅವರು ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಸಲಹೆ ಮತ್ತು ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಹಿರೇನಂದಿಹಳ್ಳಿ, ಜಮಳೂರು ಹಾಗೂ ಚಿಕ್ಕನಂದಿಹಳ್ಳಿ ಗ್ರಾಮಗಳ ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಹಾಗೂ ಸಂಜೀವಿನಿ ಮಹಿಳಾ ಸಂಘದ ಎನ್ಆರ್ಎಲ್ಎಂ ಸಿಬ್ಬಂದಿಗಳು ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಗ್ರಾಮೀಣ ಜನತೆಗೆ ಆರೋಗ್ಯ ಸೇವೆಯನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಈ ಆರೋಗ್ಯ ಶಿಬಿರಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಗ್ರಾಮದ ನೂರಾರು ಜನರು ವಿವಿಧ ಆರೋಗ್ಯ ತಪಾಸಣೆಗಳನ್ನು ಮಾಡಿಸಿಕೊಂಡು ಉಚಿತ ಔಷಧಿ ಹಾಗೂ ಆರೋಗ್ಯ ಸಲಹೆಯ ಪ್ರಯೋಜನ ಪಡೆದುಕೊಂಡರು.
ಜನಮೆಚ್ಚಿದ ವೈದ್ಯಕೀಯ ಸೇವೆ:
ಹಿರೇನಂದಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿರಂತರ ಆರೋಗ್ಯ ಶಿಬಿರಗಳನ್ನು ಆಯೋಜಿಸಿ ಸಾರ್ವಜನಿಕರ ಆರೋಗ್ಯ ರಕ್ಷಣೆಯಲ್ಲಿ ಮುಂಚೂಣಿಯಲ್ಲಿರುವ CHO ಡಾ. ಶಿವಾನಂದ ಶಿವನಾಯ್ಕರ್ ಅವರ ಕಾರ್ಯಕ್ಕೆ ಗ್ರಾಮಸ್ಥರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಈ ಯಶಸ್ಸಿಗೆ ಹಿರೇನಂದಿಹಳ್ಳಿ ಗ್ರಾ.ಪಂ ಹಾಗೂ ಕಿತ್ತೂರು ಆರೋಗ್ಯ ಕೇಂದ್ರದ ನಿರಂತರ ಸಹಕಾರವೇ ಕಾರಣ ಎನ್ನುತ್ತಾರೆ ಡಾ. ಶಿವಾನಂದ ಶಿವನಾಯ್ಕರ.
ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯ ಈ ಜನಪರ ಹಾಗೂ ಸಮಾಜಮುಖಿ ಕಾರ್ಯಕ್ರಮಕ್ಕೆ ಹಿರೇನಂದಿಹಳ್ಳಿ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

