ಸಮಯವಾಣಿ ಡೆಸ್ಕ್ : ಜೋ ಹೆಸರಿನ ಮುನಿಯ ಮಗನಾಗಿ ಭಾದ್ರಪದ ತಿಂಗಳಿನ ಅಷ್ಟಮಿಯಂದು ಜನಿಸುವ ಜೋಕುಮಾರ ಕಷ್ಟ ಕೋಟಲೆಗಳನ್ನು ಅನುಭವಿಸಿ, ಏಳನೇ ದಿನದ ರಾತ್ರಿ ಜೋಗತಿಯರಿಂಃದ ಕೊಲೆಯಾಗಿ ಕೈಲಾಸಕ್ಕೆ ತೆರಳುತ್ತಾನೆ. ಅಲ್ಲಿ ಶಿವನಿಗೆ ಭೂಲೋಕದ ಭವಣೆಗಳನ್ನು ವಿವರಿಸಿ ಮಳೆ ತರಿಸುತ್ತಾನೆ !
ಗಣೇಶ ಹಬ್ಬದ ಸಂದರ್ಭದಲ್ಲಿ ಬರುವ ಜೋಕುಮಾರನ ಹಬ್ಬ ವಿಚಿತ್ರ ನಂಬಿಕೆಯ ಆಚರಣೆ. ಗಣೇಶ ಮನೆ ಮನೆಗಳಲ್ಲಿ ಪ್ರತಿಷ್ಟಾಪಿತನಾಗಿ ಭಕ್ಷ ಭೋಜನ ಸವಿದರೆ ಜೋಕುಮಾರ ಓಣಿ ಓಣಿ ಸುತ್ತಾಡಿ ಕಷ್ಟ ಅನುಭವಿಸಿ ಮಳೆ ಇಲ್ಲದಿರುವುದನ್ನು ಖುದ್ದು ಕಂಡು ಶಿವನಿಗೆ ವರದಿ ಒಪ್ಪಿಸುತ್ತಾನೆಂದು ಕೃಷಿಕನ ನಂಬಿಕೆ.
ಗಣೇಶ ಪ್ರತಿಷ್ಟಾಪನೆಯ ನಾಲ್ಕನೆಯ ದಿನಕ್ಕೆ ಕುಂಬಾರ ಮನೆತನದಲ್ಲಿ ಜನಿಸುವ ಜೋಕುಮಾರ ತಳವಾರ ಮನೆಯಲ್ಲಿ ಮೆರೆದು ಅಂತಿಮವಾಗಿ ಓಣಿಯ ಜೋಗತಿಯರ ಕೈಯಲ್ಲಿ ದುರ್ಮರಣಕ್ಕಿಡಾಗಿ ಅಗಸರ ಪಡಿಯಲ್ಲಿ ಅಸು ನೀಗುತ್ತಾನೆ.
ಗಣೇಶ ಹಬ್ಬದ ನಾಲ್ಕನೇ ದಿನ ಜೋಕುಮಾರನ ಮೂರ್ತಿ ಊರಿನ ಕುಂಬಾರರ ಮನೆಯಲ್ಲಿ ಮಣ್ಣಿನಲ್ಲಿ ನಿರ್ಮಾಣ ವಾಗುತ್ತದೆ. ಅಗಲವಾದ ಮುಖ ಅದಕ್ಕೆ ತಕ್ಕಂತೆ ಕಣ್ಣು ಅದಕ್ಕೆ ಕಿರೀಟದಂತ ತಲೆ ಸುತ್ತು ಚೂಪಾದ ಹುರಿ ಮೀಸೆ ತೆರೆದ ಬಾಯಿ ಹಣೆಗೆ ವಿಭೂತಿ ಕುಂಕುಮದ ಪಟ್ಟೆಗಳು ಗಿಡ್ಡ ಕಾಲುಗಳು ಕೈಯಲ್ಲಿ ಸಣ್ಣ ಕತ್ತಿ ಬಾಯಿಗೆ ಬೆಣ್ಣೆಯಿಂದ ಅಲಂಕರಿಸಿ ಒನಕೆಯಮತೆ ಮಿರಿ ಮಿರಿ ಮಿಂಚುವ ಜನನೇಂದ್ರಿಯುಳ್ಳ ಮಣ್ಣಿನ ಮೂರ್ತಿಯನ್ನು ಬೇವಿನ ತಪ್ಪಲ್ಲಿ ಮುಚ್ವಿಕೊಂಡು ಬಿದಿರಿನ ಬುಟ್ಟಿಯಲ್ಲಿ ಹೊತ್ತು ತಳವಾರ ಹಾಗೂ ಸುಣಗಾರ ಇತ್ಯಾದಿ ಮನೆತನದ ಮಹಿಳೆಯರು ಜೋಕುಮಾರನನ್ನು ಕುರಿತು ಹಾಡುಗಳನ್ನು ಹಾಡುತ್ತ ಊರು ಊರು ಮನೆ ಮನೆ ಸುತ್ತುವರು. ಜನರಿಗೆ ಬೇವಿನ ಎಲೆಯಲ್ಲಿ ಬೆಣ್ಣೆ ನೀಡುವ ಇವರು ಅದಕ್ಕೆ ಪ್ರತಿಯಾಗಿ ಗೋದಿ, ಜೋಳ, ಅಕ್ಕಿ, ಎಣ್ಣೆ, ಬೆಣ್ಣೆ, ಹಣ ಪಡೆಯುತ್ತಾರೆ. ಸಂಗ್ರಹಿಸಿದ ದವಸವನ್ನು ಎಲ್ಲರೂ ಸಮನಾಗಿ ಹಂಚಿಕೊಳ್ಳುತ್ತಾರೆ.
ಊರ ತುಂಬಾ ಏಳು ದಿನ ಸಂಚರಿಸುವ ಜೋಕುಮಾರನನ್ನು ಏಳನೇ ದಿನ ನಂತರ ಬರುವ ಹುಣ್ಣಿಮೆಯೇ ಜೋಕ್ಯಾನ ಹುಣ್ಣಿಮೆ ಅಥವಾ ಅನಂತ ಹುಣ್ಣಿಮೆ ಎಂದು ಕರೆಯುವರು. ಅಲ್ಪಾಯುಷಿಯಾದ ಜೋಕುಮಾರನು ಆ ಹುಣ್ಣಿಮೆಯ ರಾತ್ರಿ ಜನ ಸಂಚಾರ ಇಲ್ಲದ ಸಮಯದಲ್ಲಿ ಓಣಿಯ ಗುಡಿ ಕಟ್ಟೆಗೆ ಇಟ್ಟು ಬರುತ್ತಾರೆ.
ಅಲ್ಲಿ ಜೋಗತಿಯವರು ಬಾರಿ ಗಿಡದ ಕಂಟಿಯಿಂದ ಮುಚ್ಚಿಸುತ್ತಾರೆ. ಈ ಸಂದರ್ಭದಲ್ಲಿ ಬಾರಿ ಕಂಟಿಗೆ ಜೋಗತಿಯ ಸೀರೆ ಸಿಲುಕಿದಾಗ ಜೋಕುಮಾರ ಸೀರೆ ಎಳೆದನೆಂದು ಅಪಪ್ರಚಾರ ಮಾಡಿ ಒನಕೆಯಿಂದ ಕಲ್ಲಿನಿಂದ ಜೋಕುಮಾರನ ತಲೆಯನ್ನು ಒಡೆದು ಹಾಕಿ ಮೂರ್ತಿಯನ್ನು ಅಗಸರ ಪಡಿಯಲ್ಲಿ ಎಸೆಯುತ್ತಾರೆ.
ಅಲ್ಲಿ ಜೋಕುಮಾರ ಮೂರು ದಿನ ನರಳುತ್ತಾನೆಂದು ಪ್ರತೀತಿ. ಆ ಮೂರು ದಿನ ಅಗಸರು ಬಟ್ಟೆ ತೊಳೆಯಲು ಹೋಗುವುದಿಲ್ಲ. ನಾಲ್ಕನೇ ದಿನ ಜೋಕುಮಾರರನನ್ನು ಪಡಿಯ ಜಾಗದಲ್ಲೇ ಹೂತು ಹಾಕಿ ಅಗಸರು ತಿಥಿಯ ಸಿಹಿಯೂಟ ಮಾಡುವ ಮೂಲಕ ಜೋಕುಮಾರನ ಹಬ್ಬ ಅಂತ್ಯಗೊಳ್ಳುತ್ತದೆ.
ಭೂಲೋಕದ ಯಾತ್ರೆ ಮುಗಿಸಿ ಕೈಲಾಸಕ್ಕೆ ಜೋಕುಮಾರನಿಗಿಂತ ಪೂರ್ವದಲ್ಲೇ ತೆರಳುವ ಗಣೇಶ ಇಲ್ಲಿನ ವೈಭವ ಸುಭಿಕ್ಷೇ ಮತ್ತು ಸಿಹಿ ಭಕ್ಷೆಗಳ ವರದಿ ಸಲ್ಲಿಸುತ್ತಾನೆ. ನಂತರ ಕೈಲಾಸಕ್ಕೆ ತೆರಳುವ ಜೋಕುಮಾರ ಭೂಲೋಕದಲ್ಲಿ ತಾನು ಅನುಭವಿಸಿದ ಕಷ್ಟ ಕಾರ್ಪಣ್ಯಗಳನ್ನು ವಿವರಿಸಿ ಇದಕ್ಕೆಲ್ಲ ಮಳೆಯಾಗದೇ ಕೆಲಸವಿಲ್ಲದೇ ಇರುವ ಕಾರಣವೆಂದು ಶಿವನಿಗೆ ವಿವರಿಸುತ್ತಾನೆ
ಬಳಿಕ ಶಿವ ಭೂಮಿಗೆ ತಂಪೆರೆಯುವಂತೆ ವರುಣ ದೇವನಿಗೆ ಆದೇಶಿಸುತ್ತಾನಂತೆ. ಜೋಕುಮಾರನ ಸುತ್ತಲೂ ಅನೇಕ ಕಥೆಗಳಿವೆ. ಭೂಲೋಕಕ್ಕೆ ಈತನು ಬಂದು ಹೋದ ನಂತರ ಬೆಂಡೆಯ ಲೋಳೆ ಲೋಳೆಯಾಗುವುದರಿಂದ ಅದು ಆತನು ಬಿಟ್ಟು ಹೋದ ವೀರ್ಯವೆಂದು ಹಳ್ಳಿಗರು ನಂಬುತ್ತಾರೆ.
ಇಂದಿಗೂ ಹಳ್ಳಿಗಳಲ್ಲಿ ಯಾರಾದರೂ ಮೆರೆಯುತಿದ್ದರೆ ದೊಡ್ಡ ಜೋಕುಮಾರ ಆಗ್ಯಾನ ಎಂದು ಹೇಳುವರು.
ಕಾಮುಕ ಗರ್ವಿಷ್ಟ ಸೊಕ್ಕಿನವ ಡೌಲು ಬೆಡಗು ಮನ್ಮಥ ಠೀವಿ ಉಳ್ಳವ ಎಂಬ ಅರ್ಥ ನೀಡುತ್ತದೆ ನೊಂದವರ ಬಡವರ ರೈತರ ಪ್ರತೀಕವಾದ ಜೋಕುಮಾರನ ಬಗ್ಗೆ ಬಹಳಷ್ಟು ಅದ್ಯಯನ ನಡೆಯಬೇಕಿದೆ.
ಇದು ನಮ್ಮ ಸಂಸ್ಕೃತಿ..
ಸಂಪಾದಕೀಯ ಸುದ್ದಿ …ಮಡಿವಾಳಪ್ಪ ದಾಸನಕೊಪ್ಪ
ಜೋಕುಮಾರನ ಹಾಡು ಉತ್ತರ ಕರ್ನಾಟಕ ಶೈಲಿಯ 👇



