Search
Close this search box.

ಕೃಷಿಕನ ಬದುಕಿನಲ್ಲಿ ಆಸರೆಯಾಗಿರುವ ಎತ್ತುಗಳನ್ನು ಪೂಜಿಸುವ ಹಬ್ಬ : ಮಣ್ಣೆತ್ತಿನ ಅಮಾವಾಸ್ಯೆ

ಸಮಯವಾಣಿ ಡೆಸ್ಕ್ : ಜೂನ್‌ 24ರಂದು ಮಣ್ಣೆತ್ತಿನ ಅಮವಾಸ್ಯೆಯನ್ನು ಆಚರಿಸಲಾಗುತ್ತದೆ. ಕೃಷಿಕನ ಬದುಕಿನಲ್ಲಿ ಆಸರೆಯಾಗಿರುವ ಎತ್ತುಗಳನ್ನು ಪೂಜಿಸುವ  ಹಬ್ಬ ಇದಾಗಿದೆ. ವೈಶಾಖದ ಬಿಸಿಲ ಬೇಗೆಯಿಂದ ತಂಪಿನೆಡೆಗೆ ಮೋಡಗಳನ್ನು ನೋಡುತ್ತಾ ಮಳೆಯಾದೊಡನೆ ಬೀಜ ಬಿತ್ತುವ ತವಕದಿಂದ ರೈತ ಇರುವಾಗ ಮಳೆಮೋಡಗಳ ಮೂಲಕ ಬರುವುದಾಗಿದೆ. ಕಾರಹುಣ್ಣಿಮೆ ಮುಗಿದು ರೈತಾಪಿಗಳು ಸಡಗರದಿಂದ ಪೂಜಿಸುವ ಹಬ್ಬ ಮಣ್ಣೆತ್ತಿನ ಅಮವಾಸ್ಯೆ.

ಪೂಜ್ಯಭಾವ ಹಾಗೂ ವಿಧಿವಿಧಾನ

ಪೂಜೆ ಹೀಗೆ : ಕಾರ ಹುಣ್ಣಿಮೆ ಮುಗಿದು ಬರುವ ಅಮವಾಸ್ಯೆಯೇ ಮಣ್ಣೆತ್ತಿನ ಅಮವಾಸ್ಯೆ. ಹೊಲದಿಂದ ಮಣ್ಣನ್ನು ತಂದು ಜೋಡಿ ಎತ್ತುಗಳನ್ನು ತಯಾರಿಸುತ್ತಾರೆ. ಭೂಮಿಯನ್ನು ಉಳುವ ಸಂಕೇತವಾಗಿ ಎತ್ತುಗಳನ್ನು ದೊಡ್ಡ ಸಣ್ಣ ಆಕಾರಗಳಲ್ಲಿ ತಯಾರಿಸಿಕೊಳ್ಳುತ್ತಾರೆ. ಕುಂಬಾರರ ಮನೆಗಳಿಂದಲೂ ತಯಾರಿಸಿದ ಜೋಡಿ ಎತ್ತುಗಳನ್ನು ಖರೀದಿಸಿ ತರುತ್ತಾರೆ. ಕುಂಬಾರರು ಎತ್ತುಗಳೊಂದಿಗೆ ಒಂದಿಷ್ಟು ಹಸಿ ಮಣ್ಣನ್ನೂ ಕೊಡುತ್ತಾರೆ. ಈ ಹಸಿ ಮಣ್ಣಲ್ಲಿ ದನಗಳಿಗೆ ಹುಲ್ಲು ತಿನ್ನಲು ಗ್ವಾದಲಿ ಮಾಡುತ್ತಾರೆ. ಮಣ್ಣಿನ ಎತ್ತುಗಳನ್ನು ಸಿಂಗರಿಸುತ್ತಾರೆ. ಸಿಂಗರಿಸಿದ ಜೋಡೆತ್ತುಗಳಿಗೆ ಆರತಿ ಎತ್ತಿ ಪೂಜಿಸುತ್ತಾರೆ.

ಮಣ್ಣಿನಿಂದ ಎತ್ತುಗಳನ್ನು ಮಾಡಿ ಅದರ ಮುಂದೆ ಒಂದು ಚಿಕ್ಕ ಗ್ವಾದಲಿ (ಮೇವು-ನೀರು ಹಾಕಲು) ಮಾಡಿ ಪೂಜಿಸುವ ಸಂಪ್ರದಾಯವಿದೆ. ಈ ದಿನ ಮಣ್ಣಿನ ಎತ್ತು ಮಾಡಿ, ಅದರಲ್ಲಿ ವೃಷಭವನ್ನು ಆವಾಹನೆ ಮಾಡಿ ಷೋಡಶೋಪಚಾರಗಳಿಂದ ಪೂಜಿಸಬೇಕು. ಮಣ್ಣನ್ನೇ ನಂಬಿ ಮಣ್ಣಿಂದ ಬದುಕೇನ ಮಣ್ಣೆನಗೆ ಮುಂದೆ ಹೊನ್ನ ಅಣ್ಣಯ್ಯ ಮಣ್ಣೇ ಲೋಕದಲಿ ಬೆಲೆಯಾದ್ದು ಎಂದು ಹುಟ್ಟಿನಿಂದ ಚಟ್ಟದವರೆಗೂ ಮಣ್ಣ ಜೊತೆಗೆ ನಮ್ಮ ಬದುಕಿನಲ್ಲಿ ಆ ಮಣ್ಣಿನಿಂದ ಆರಂಭವಾಗುವ ಮಣ್ಣೆತ್ತು ಅಮವಾಸ್ಯೆ.

ತಮ್ಮ ರಾಸುಗಳಿಗೆ ಮಳೆಯಿಂದ ಕೆಲವು ಸಮಯ ಬಿಡುವು ಕೊಟ್ಟು ಅವುಗಳನ್ನು ಗೌರವಿಸುವ ಸಂಪ್ರದಾಯ ಮಣ್ಣೆತ್ತಿನ ಅಮವಾಸ್ಯೆ. ಈ ಅಮವಾಸ್ಯೆಗೆ ತಮ್ಮ ಮನೆಯ ಎತ್ತುಗಳನ್ನು ಸಿಂಗರಿಸುವುದಷ್ಟೇ ಅಲ್ಲ. ಎತ್ತುಗಳು ಇರಲಿ ಇಲ್ಲದಿರಲಿ ಎಲ್ಲರೂ ಗೌರವಿಸುವರು. ಮಣ್ಣಿಂದ ಎತ್ತಿನ ಮೂರ್ತಿಗಳನ್ನು ಮಾಡಿ ಅವುಗಳನ್ನು ಮನೆಯಲ್ಲಿ ಇಟ್ಟು ಅಮವಾಸ್ಯೆಯಂದು ಪೂಜಿಸುವರು ಮರುದಿನ ಪಾಡ್ಯ ಕೂಡ ಪೂಜಿಸಿ ಹೊಲ ಹೊಂದಿದವರು ಅವುಗಳನ್ನು ನಾಗರ ಪಂಚಮಿಯವರೆಗೂ ದಿನನಿತ್ಯ ಪೂಜಿಸುತ್ತ ಕೆರೆಕೆಟ್ಟಂಬಲಿ ಅಂತ ಮಾಡಿ ಅಂಬಲಿ ಮಾಡಿಕೊಂಡು ಪಂಚಮಿಯ ನಂತರದ ದಿನ ತಮ್ಮ ಹೊಲಗಳಿಗೆ ತಗೆದುಕೊಂಡು ಹೋಗಿ ಇಡುವರು. ಅಂದರೆ ಮಳೆಯಿಂದ ಬಿತ್ತಿದ ಫಸಲು ಚೆನ್ನಾಗಿ ಬರಲಿ, ತಮ್ಮ ರಾಸುಗಳಿಗೆ ಯಾವ ತೊಂದರೆಯೂ ಬಾರದಿರಲಿ ಎಂದುಕೊಂಡು ಭಕ್ತಿಯಿಂದ ಸ್ಮರಿಸುವ ಅಮವಾಸ್ಯೆಯಿದು.

ಸಮೃದ್ಧಿಯ ನಿರೀಕ್ಷೆಯಲ್ಲಿ : ರೈತರು ಎತ್ತುಗಳನ್ನು ಎಷ್ಟರ ಮಟ್ಟಿಗೆ ನಂಬಿರುವರೆಂದರೆ ಕಾರಹುಣ್ಣಿಮೆಯ ಕರಿ ಹರಿದು ನಂತರ ಮನೆಗೆ ತರುವಾಗ ಮನೆಯ ಬಾಗಿಲಲ್ಲಿ ತಾವು ಆ ವರ್ಷ ತಮ್ಮ ಹೊಲಗಳಿಗೆ ಯಾವ ಬೆಳೆ ಬಿತ್ತಬೇಕು ಎಂದು ನಿರ್ಧರಿಸುವರೋ ಆ ಎಲ್ಲ ಧಾನ್ಯಗಳನ್ನು ಮನೆಯ ತಮ್ಮ ಎತ್ತು ಹಾದು ಹೋಗುವ ಬಾಗಿಲಲ್ಲಿ ಇಡುತ್ತಾರೆ ಆಗ ಎತ್ತು ತನ್ನ ಕಾಲಿನಿಂದ ಯಾವ ಧಾನ್ಯವಿದ್ದ ಸೇರನ್ನು ತಳ್ಳಿ ಮುಂದೆ ಸಾಗುತ್ತದೆಯೋ ಆ ಧಾನ್ಯದ ಬೆಳೆಯನ್ನು ಆ ವರ್ಷ ತಮ್ಮ ಹೊಲಕ್ಕೆ ಹಾಕುವ ಮಟ್ಟಿಗೆ ಎತ್ತುಗಳ ಮೇಲೆ ಭಕ್ತಿಯನ್ನು ಹೊಂದಿರುವರು. ಕಾರಹುಣ್ಣಿಮೆಗೆ ಮಳೆ ಬಿದ್ದು ತಮ್ಮ ಹೊಲಗಳಿಗೆ ಬಿತ್ತನೆ ತಯಾರಿ ಮಾಡಿದ ರೈತ ಮಣ್ಣೆತ್ತು ಅಮವಾಸ್ಯೆ ದಿನ ಎತ್ತುಗಳನ್ನು ಸಿಂಗರಿಸಿ ಅವುಗಳಿಗೂ ಕೂಡ ವಿಶ್ರಾಂತಿ ನೀಡುವ ಜೊತೆಗೆ ಪೂಜ್ಯನೀಯವಾಗಿ ಪೂಜಿಸುವನು. ಅವುಗಳಿಗೆ ಉತ್ತಮ ಆಹಾರ ನೀಡುವುದು. ಚೆನ್ನಾಗಿ ನೋಡಿಕೊಳ್ಳುವುದು ಮುಂದೆ ಶ್ರಾವಣ ಆರಂಭವಾಗುವ ಹೊತ್ತಿಗೆ ಅವು ವಿಶ್ರಾಂತಿಯಿಂದ ಮತ್ತೆ ಹೊಲ -ಗದ್ದೆಗಳ ಕೆಲಸಕ್ಕೆ ಅಣಿಯಾಗಲೆಂದು ಪೂಜಿಸುವನು. ಅಷ್ಟೇ ಅಲ್ಲ ಮಣ್ಣಿನಿಂದ ಮಾಡಿದ ಮೂರ್ತಿಗಳನ್ನು ಕೂಡ ಜಗುಲಿಯ ಮೇಲಿಟ್ಟು ನಾಗರ ಪಂಚಮಿಯ ನಂತರದ ದಿನ ಕೆರೆಕಟ್ಟಂಬಲಿ ಅಂತಾ ಆಚರಿಸುವರು. ಈ ದಿನ ಮಣ್ಣೆತ್ತಿನ ಅಮವಾಸ್ಯೆ ಪೂಜಿಸಿದ ಮೂರ್ತಿಗಳನ್ನು ಮನೆಯಲ್ಲಿ ಅಂಬಲಿ ಮಾಡಿಕೊಂಡು ಹೊಲಕ್ಕೆ ಒಯ್ದು ಒಂದೆಡೆ ಬೇವಿನ ಮರವಿದ್ದರೆ ಅವುಗಳ ಕೆಳಗೆ ಇಟ್ಟು ಅಂಬಲಿ ಎಡೆ ಹಿಡಿದು ಬರುವರು. ಅಂಬಲಿ ಮನಸಿಗೆ ತಣಿವು. ಅಂಬಲಿ ಕುಡಿದ ಮನಸು ಹೇಗೆ ತಣಿದು ಮತ್ತೆ ಚೇತನಗೊಳ್ಳುವುದೋ ಹಾಗೆ ತನ್ನ ಜಾನುವಾರುಗಳ ಬದುಕು ಕೂಡ ತಣಿವಿನಿಂದ ವರ್ಷವಿಡೀ ಕೂಡಿರಲಿ ಎಂಬ ಭಕ್ತಿ ಭಾವ

2 thoughts on “ಕೃಷಿಕನ ಬದುಕಿನಲ್ಲಿ ಆಸರೆಯಾಗಿರುವ ಎತ್ತುಗಳನ್ನು ಪೂಜಿಸುವ ಹಬ್ಬ : ಮಣ್ಣೆತ್ತಿನ ಅಮಾವಾಸ್ಯೆ”

Leave a Comment

error: Content is protected !!