Search
Close this search box.

ಇಂದು ವಟಪೂರ್ಣಿಮೆ ಹುಣ್ಣಿಮೆಯು ಪತಿಯ ಆಯುಷ್ಯವನ್ನು ಹೆಚ್ಚಿಸುತ್ತದೆ ಬಲವಾಗಿ ನಂಬುವ ನಮ್ಮ ಹಿಂದೂಗಳ ಹಬ್ಬ. ಇದು ನಮ್ಮ ಸಂಸ್ಕೃತಿ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಗಿಂತ ಬಹಳ ಭಿನ್ನವಾದ ಹಬ್ಬ

ಇಂದು ವಟಪೂರ್ಣಿಮೆ ಹುಣ್ಣಿಮೆ 11.06.2025 ಬುಧವಾರ 1.13pm ತನಕ ಆಲದ ಮರ ಅಥವಾ ವಟವೃಕ್ಷ ಹಿಂದುಗಳಿಂದ ಪೂಜಿಸಲ್ಪಡುವ  ಒಂದು ಮರ. ಸತ್ಯವಾನನ ಮರಣ ನಂತರ ಸತಿಯಾದ ಸಾವಿತ್ರಿಯೂ ತನ್ನ ಪತಿಯ ಶವವನ್ನು ವಟವೃಕ್ಷದ ಕೆಳಗೆ ಮಲಗಿಸಿ ಹಾಳಾಗದಂತೆ ಕಾಯಲು ಮರಕ್ಕೆ ತಿಳಿಸಿ ಅಲ್ಲಿಂದ ತೆರಳಿ ಯಮನಲ್ಲಿ ಬೇಡಿ ತನ್ನ ಪತಿಯ ಆತ್ಮವನ್ನು ಮರಳಿ ತರುತ್ತಾಳೆ. ಇದು ಈಗಲೂ ವಟ ಸಾವಿತ್ರಿ ವ್ರತ ಎಂದು ಆಚರಣೆಯಲ್ಲಿ ಇದೆ. ವೈಶಾಖ  ಮಾಸದ ಅಮಾವಾಸ್ಯೆಯಿಂದ ಪ್ರಾರಂಭಿಸಿ ಜೇಷ್ಠ ಮಾಸದ ಹುಣ್ಣಿಮೆ ವರೆಗೂ ವೃತದ ಆಚರಣೆ ಇರುತ್ತದೆ. ಈ ಸಮಯದಲ್ಲಿ ಹೆಣ್ಣು ಮಕ್ಕಳು ಮರದ ಪ್ರದಕ್ಷಣೆ ಹಾಕುವುದರಿಂದ ಗಂಡನ ಆಯುಷ್ಯ ವೃದ್ಧಿಯಾಗುತ್ತದೆ ಎನ್ನುವ ಅಚಲ ನಂಬಿಕೆ ನಮ್ಮ ಹಿಂದುಗಳಲ್ಲಿ ಇದೆ. ಅಂದರೆ ದೇಹದ ಭಾಗವನ್ನು ಕೊಳೆಯದಂತೆ ಇಡುವ ಶಕ್ತಿ ಈ ಮರದಲ್ಲಿ ಇದೆ ಎಂದು ಹಿಂದಿನವರು ಪರೋಕ್ಷವಾಗಿ ನಮಗೆ ತಿಳಿಸಿದ್ದಾರೆ.

ಎಷ್ಟೊಂದು ಮರಗಳನ್ನು ನಮಗೆ ದಿನನಿತ್ಯದ ವಾಡಿಕೆಯಲ್ಲಿ ತಂದು ನಮಗೆ ತಿಳಿಯುವಂತೆ ಮಾಡಿದ್ದಕ್ಕೆ ಅವರಿಗೊಂದು ಕೃತಜ್ಞತೆ ತಿಳಿಸಬೇಕು ಅಲ್ಲವೇ. ಪ್ರೇಮಿಗಳ ದಿನ ಅಪ್ಪನಿಗೊಂದು ದಿನ ಅಮ್ಮನಿಗೊಂದು ದಿನ ಇದೇ ರೀತಿ ಬೇರೆ ಬೇರೆ ದಿನಗಳನ್ನು ಆಯ್ದುಕೊಂಡ ಪಶ್ಚಿಮಾತ್ಯ ಸಂಸ್ಕೃತಿಗೂ ನಮ್ಮ ಸಂಸ್ಕೃತಿಗೂ ಅಜಗಜಾಂತರ.

ಪುಂಸವನದಲ್ಲಿ ಮತ್ತು ಹೋಮಗಳಲ್ಲಿ ಇದರ ಬಳಕೆ ಇದೆ. ವಟವೃಕ್ಷದ ಇಳಿಬಿದ್ದ ಬೇರುಗಳು ಚಿಗುರು ಹಣ್ಣು ಎಲ್ಲವೂ ಔಷಧೀಯ ಗುಣವನ್ನು ಹೊಂದಿದೆ. ಮರದಿಂದ ಜೋತುಬಿದ್ದ ಬೇರುಗಳಿಗೆ ಬಿಳಲು ಎಂದು ಆಡು ಭಾಷೆಯಲ್ಲಿ ಕರೆಯುತ್ತಾರೆ.

1.  ಬಿಳಲನ್ನು ಜಜ್ಜಿ ಕಷಾಯ ಮಾಡಿ ಕಲ್ಲು ಸಕ್ಕರೆಯೊಂದಿಗೆ ಸೇವಿಸುವುದರಿಂದ ಉರಿಮೂತ್ರ ಗುಣವಾಗುತ್ತದೆ.

2.  ಇದರ ರೆಂಬೆಯನ್ನು ಮುರಿದಾಗ ಹಾಲಿನಂತಹ ದ್ರವ ಬರುತ್ತದೆ ಇದನ್ನು ಕಣ್ಣಿಗೆ ಬಿಡುವುದರಿಂದ ಕಣ್ಣಿನ ರೋಗಗಳು ಗುಣವಾಗುತ್ತದೆ.

3.  ಬಿಳಲನ್ನು ರುಚಿಗೆ ತಕ್ಕಷ್ಟು ಬೆಲ್ಲ ಅಥವಾ ಕೆಂಪು ಕಲ್ಲು ಸಕ್ಕರೆ ಹಾಕಿ ಕುದಿಸಿ ದಿನಕ್ಕೆರಡು ಬಾರಿ ಕುಡಿಯುತ್ತಾ ಬಂದರೆ ಕಾಮಾಲೆ ಗುಣವಾಗುತ್ತದೆ.

4. ಬಿಳಲನ್ನು ಚಚ್ಚಿ ತುಪ್ಪದಲ್ಲಿ ಕಲಸಿ ಹಚ್ಚುವುದರಿಂದ ಗಾಯ ಬೇಗನೆ ವಾಸಿಯಾಗುತ್ತದೆ.

5. ಬಿಳಲಿನಿಂದ ಹಲ್ಲು ಉಜ್ಜುವುದರಿಂದ ಹಲ್ಲಿನ ರೋಗಗಳು ಗುಣವಾಗುತ್ತದೆ.

6. ರೆಂಬೆಯಲ್ಲಿ ಬರುವ ಆಂಟಿಗೆ ತುಪ್ಪ ಸೇರಿಸಿ ಸೇವಿಸುವುದರಿಂದ ಕೆಮ್ಮು ಗುಣವಾಗುತ್ತದೆ.

7. ಬಿಳಲನ್ನು ಸುಟ್ಟು ಬಸ್ಮ ಮಾಡಿ ನೀರಿನಲ್ಲಿ ಬೆರೆಸಿ ಸೇವಿಸುವುದರಿಂದ ಬಿಕ್ಕಳಿಕೆ ನಿಲ್ಲುತ್ತದೆ.

8. ಎಲೆಯ ಮೃದುವಾದ ಭಾಗವನ್ನು ಧನಿಯಾ ಪುಡಿ ಸೇರಿಸಿ  ಕಷಾಯ ಮಾಡಿ ಕುಡಿಯುವುದರಿಂದ ರಕ್ತಾತಿಸಾರ ಗುಣವಾಗುತ್ತದೆ.

9. ಇದರ ಹಣ್ಣನ್ನು ಹಾಲಿನೊಂದಿಗೆ ಅಥವಾ ನೀರಿನೊಂದಿಗೆ ಸೇವಿಸುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.

10. ಹಣ್ಣನ್ನು ಹಾಲು ಕಲ್ಲುಸಕ್ಕರೆ ಸೇರಿಸಿ ಸೇವಿಸುವುದರಿಂದ ಹೊಟ್ಟೆಯ ಉರಿ ಗುಣವಾಗುತ್ತದೆ.

11. ಹಾಲು ಆಗದ ಹಸುಳೆಗೆ ಪ್ರತಿದಿನ ಇದರ ಕಷಾಯವನ್ನು ಕುಡಿಸುವುದರಿಂದ ಹಾಲಿನಲ್ಲಿ ಸಿಗುವ ಎಲ್ಲಾ ಅಂಶಗಳು ಮಗುವಿಗೆ ದೊರೆಯುತ್ತದೆ ಮತ್ತು ಅಜೀರ್ಣ ಆಗುವುದಿಲ್ಲ. ನಾನು ಹಸುಳೆಯಾದಾಗ ನನ್ನಮ್ಮ ನನಗೆ ಕೊಟ್ಟಿರುವ ಕಷಾಯ ಇದೆ ಆಗಿದೆ.

12. ಹಣ್ಣನ್ನು ತಿಂದು ಹಾಲು ಕುಡಿಯುವುದರಿಂದ ಶಕ್ತಿ ವೃದ್ಧಿಯಾಗುತ್ತದೆ.

13. ಇದರ ಕಷಾಯ ಸೇವನೆಯಿಂದ ಬಾಯಿಹುಣ್ಣು ಗುಣವಾಗುತ್ತದೆ.

14. ಹಲವರು ತಯಾರಿಸುವ ಕೂದಲಿನ ಎಣ್ಣೆಯಲ್ಲಿ ಆಲದ ಬಿಳಲು ಇರುತ್ತದೆ.

15. ಅಲುಗಾಡುತ್ತಿರುವ ಹಲ್ಲಿಗೆ ಇದರ ಹಾಲನ್ನು ಬಿಡುವುದರಿಂದ ಸುಲಭದಲ್ಲಿ ಕೀಳಬಹುದು. ಮಾಹಿತಿ ಇದ್ದವರಲ್ಲಿ ಮಾತ್ರ ಮಾಡಿ.

16. ಮೇಲಿಂದ ಮೇಲೆ ಇದರ ಹಾಲನ್ನು ಬಿಡುತ್ತಿದ್ದರೆ ಕುರು ಕಳಿತು ಒಡೆಯುತ್ತದೆ ನಂತರ ಮತ್ತೆ ಇದೆ ಹಾಲನ್ನು ಬಿಡುತ್ತಾ ಬಂದರೆ ಪೂರ್ತಿ ಗುಣವಾಗುತ್ತದೆ

ವಟ ಸಾವಿತ್ರಿ ವ್ರತ ವಟವೃಕ್ಷದ ಕೆಳಗೆ  ಸಾವಿತ್ರಿಯು ಸತ್ಯವಾನನನ್ನು ಬದುಕಿಸಿದ್ದರಿಂದ ಇದಕ್ಕೆ ವಟ ಸಾವಿತ್ರಿ ವ್ರತ ಅಂತ ಹೆಸರು ಬಂತು..‌

ಈ ವೃತವನ್ನು ಪತಿಯ ಆಯುಷ್ಯ ಅಭಿವೃದ್ಧಿ ಬಯಸುವ ಪ್ರತಿ ಹೆಣ್ಣು ಮಕ್ಕಳು ಈ ವೃತವನ್ನು ಮಾಡಬೇಕು . ಮನೆಯಲ್ಲಿ ಮಾಡುವ ಪದ್ಧತಿ ಇಲ್ಲ ಅನ್ನುವ ಮಾತೇ ಇಲ್ಲ..‌. ಈ ವೃತವನ್ನು ಮಾಡುವದರಿಂದ ಅತ್ತೆ ಮನೆ ಮತ್ತು ತವರು ಮನೆ ಅಭಿವೃದ್ಧಿ ಹೊಂದುತ್ತದೆ… ಕೆಲವರ ಮನೆಯಲ್ಲಿ ಮೂರು ದಿನ ಉಪವಾಸ ಮಾಡಿ ಚತುರ್ದಶಿ ರಾತ್ರಿ ಅಂದರೆ ಹುಣ್ಣಿಮೆ ತಿಥಿಯುಕ್ತ ಕೂಡಿರುತ್ತೆ ಆದಿನ ಪಾರಣಿ ಮಾಡಿ ವೃತವನ್ನು ಮುಗಿಸುತ್ತಾರೆ. ಇನ್ನೂ ಕೆಲವರು ಒಂದೇ ದಿನ ಈ ವೃತವನ್ನು ಮಾಡುತ್ತಾರೆ ..‌  ಈ ವೃತವನ್ನು ಹೇಗೆ ಮಾಡಬೇಕು ಅಂತ ಅತ್ಯಂತ ಸರಳ ರೀತಿಯಲ್ಲಿ ಹೇಳಿಕೊಡುತ್ತೇನೆ. ಈ ವೃತವನ್ನು ಯಾವುದಾದರೂ ದೇವಸ್ಥಾನದಲ್ಲಿ ವಟವೃಕ್ಷ ಇದ್ದಲ್ಲಿ ಮಾಡಿ , ಅಕಸ್ಮಾತ್ ಇಲ್ಲ ಎಲ್ಲೂ ಅಂದರೆ ಮನೆಯಲ್ಲಿ ಪೋಟೊ ಇಟ್ಟು ಪೂಜೆ ಮಾಡಬಹುದು.

ನಮ್ಮ ಮನೆಯಲ್ಲಿ ಪೋಟೊನೂ ಇಲ್ಲ ಅಂದರೆ ಒಂದು ಮಣೆಯ ಮೇಲೆ ರಂಗವಲ್ಲಿ ಯಿಂದ ವಟವೃಕ್ಷ ಬರೆದು ಸತ್ಯವಾನ್ ಸಹಿತ ಸಾವಿತ್ರೀ ದೇವತಾಭ್ಯೋನಮಃ ಅಂತ ಆಹ್ವಾಹನ ಮಾಡಿ ಸಹ ಪೂಜೆಯನ್ನು ಮಾಡಬಹುದು ಅನಾನಕೂಲತೆ ಇದೆ ಅಂತ ವೃತ ಭಂಗ ಮಾಡಬಾರದು…‌ ಈ ದಿನ

ಪೂಜೆಯ ವಿಧಾನ ಸಂಕಲ್ಪ

ಮಮ ಇಹಜನ್ಮನಿ ಜನ್ಮಾಃತರೇಚ ಅವೈದವ್ಯ ಪ್ರಾಪ್ತಯೇ ಭರ್ತುಃ ಪುತ್ರಾಣಾಂ ಚ ಆಯುರಾರೋಗ್ಯ ಧನ ಸಂಪದ ಆದಿ ಪ್ರಾಪ್ತಯೇ ಸಾವಿತ್ರೀ ವೃತಂ ಕರಿಷ್ಯೇ .. ಅಂತ ಬಲಗೈಯಲ್ಲಿ ಅಕ್ಷತೆ ಹಿಡಿದು ಸಂಕಲ್ಪ ಮಾಡಿ ತೀರ್ಥ ಸೌಟಿನಿಂದ (ಉದ್ಧರಣೆ) ಕಲಶದ ನೀರನ್ನು ಹಾಕಿ ಅಕ್ಷತೆಯನ್ನು ಬಿಡಬೇಕು…‌ ನಂತರ ವಟವೃಕ್ಷ ಕ್ಕೆ ಅಕ್ಷತೆ ಹಾಕಿ ಕೈಮುಗಿದು ಸತ್ಯವಾನ್ ಸಹಿತ ಸಾವಿತ್ರಿ ದೇವತಾಭ್ಯೋ ನಮಃ ಆಹ್ವಾನಾರ್ಥೆ ಅಕ್ಷತಾ ಹಾಕಿ ಆಸನಾರ್ಥೇ ಅಕ್ಷತಾಂ ಸಮರ್ಪಯಾಮಿ ಅಂದರೆ. ಸತ್ಯವಾನ್ ಸಹಿತ ಸಾವಿತ್ರಿ ನಿಮ್ಮನ್ನ ಪೂಜೆ ಮಾಡುತ್ತೇನೆ ಬನ್ನಿ ಅಂತ ಕರೆದು ಕೂಡಿಸುವದು … ನಂತರ ಪಾದಯೋ ಪಾದ್ಯಂ ಸಮರ್ಪಯಾಮಿ ಪಾದಗಳಿಗೆ ನೀರು ಹಾಕುವದು ಹಸ್ತಯೋ ಅರ್ಘ್ಯಂ ಸಮರ್ಪಯಾಮಿ ಕೈಗಳಿಗೆ ನೀರು ಕೊಡುವದು ಮುಖೆ ಆಚಮನೀಯಂ ಮರ್ಪಯಾಮಿ ಕುಡಿಯಲು ನೀರು ಕೊಡುವದು .. ಒಂದೊಂದು ತೀರ್ಥದ ಸೌಟಿನಿಂದ ನೀರು ಒಂದು ತಟ್ಟೆಯಲ್ಲಿ ಬಿಡಬೇಕು ನಂತರ ಸ್ನಾನಂ ಸಮರ್ಪಯಾಮಿ ಹೂವಿನಿಂದ ನೀರು ಪ್ರೋಕ್ಷಣೆ ಮಾಡಿ ವಸ್ತ್ರಂ ಸಮರ್ಪಯಾಮಿ ಗೆಜ್ಜೆವಸ್ತ್ರ ಎರಿಸಬೇಕು ನಂತರ ಗಂದ , ಅಕ್ಷತೆ ಅರಿಷಿಣ , ಕುಂಕುಮ ಹೂ ಎರಿಸಿ ಧೂಪ ದೀಪ ನೈವೇದ್ಯ ನೈವೇದ್ದಕ್ಕೆ ನೇರಳೆ ಹಣ್ಣು ಮತ್ತು ಮಾವಿನ ಹಣ್ಣು ತೆಂಗಿನಕಾಯಿ ಹಾಲು ಹಣ್ಣು. ಇತ್ಯಾದಿ ತಾಂಬೂಲ ದಕ್ಷಿಣೆ ಪ್ರದಕ್ಷಣೆ ನಮಸ್ಕಾರ ಮಾಡಿ ಕಲಶದಲ್ಲಿ ಉಳಿದ ನೀರನ್ನು ಈ ಕೆಳಗಿನ ಮಂತ್ರ ಹೇಳಿ ಹಾಕಬೇಕು..

ಮಂತ್ರ

ವಟ ಸಿಂಚಾಮೆ ತೇ ಮೂಲಂ ಸಲೀಲೈರಮೃತೋಪಮೈಃ l ಸುಖನೀಂ ಕುರು ಮಾಂ ನಾಥ ಪತಿ ಪುತ್ರ ಸಮನ್ವೀತಾಮ್ ll ನಂತರ ಈ ಮಂತ್ರ ಹೇಳಿ ದಾರಕಟ್ಟಬೇಕು… ಕೆಲವರು ಹನ್ನೊಂದು ಸುತ್ತು ಸುತ್ತತಾರೆ ಕೆಲವ ಕಡೆ ಒಂಬತ್ತು ಸುತ್ತು ನಿಮ್ಮ ಪದ್ಧತಿ ಹೇಗಿದೆ ನೋಡಿ

ಮಂತ್ರ

ಸೂತ್ರೇಣ ವೇಷ್ಟಯೇ ಭಕ್ತ್ಯಾ ಗಂಧಪುಪ್ಷಾಕ್ಷತೈಃ ಶುಭೈಃ ಮಮ ಸಂತಾನ ವೃದ್ಧಿಂ ಚ ಕುರು ತ್ವಂ ವಟ ನಾಯಕ ll

ನಂತರ ವಾಣಿ ಸಹಿತ ಬ್ರಹ್ಮದೇವರಿಗೆ ನಮಸ್ಕಾರವನ್ನು ಮಾಡಬೇಕು ನಂತರ ಮುತ್ತೈದೆಯರಿಗೆ ಉಡಿತುಂಬಬೇಕು…. ಸತ್ಯವಾನ ಸಾವಿತ್ರಿ ಕಥೆ ಶ್ರವಣ ಮಾಡಬೇಕು….

2 thoughts on “ಇಂದು ವಟಪೂರ್ಣಿಮೆ ಹುಣ್ಣಿಮೆಯು ಪತಿಯ ಆಯುಷ್ಯವನ್ನು ಹೆಚ್ಚಿಸುತ್ತದೆ ಬಲವಾಗಿ ನಂಬುವ ನಮ್ಮ ಹಿಂದೂಗಳ ಹಬ್ಬ. ಇದು ನಮ್ಮ ಸಂಸ್ಕೃತಿ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಗಿಂತ ಬಹಳ ಭಿನ್ನವಾದ ಹಬ್ಬ”

Leave a Comment

error: Content is protected !!