ಹಿರೇನಂದಿಹಳ್ಳಿಯಲ್ಲಿ ಭಕ್ತಿ ಸಂಭ್ರಮ; ಶ್ರೀ ಮಡಿವಾಳೇಶ್ವರ ಮಹಾತ್ಮೆ ಶ್ರಾವಣ ಮಾಸದ ಪುರಾಣ ಪಠಣ, ಅನ್ನದಾಸೋಹ ಸಂಪನ್ನ

ಒಂದು ತಿಂಗಳ ಕಾಲ ಭಕ್ತಿ, ಪುರಾಣ ಪ್ರವಚನ ಹಾಗೂ ಅನ್ನಸೇವೆಯಲ್ಲಿ ತೊಡಗಿದ ಗ್ರಾಮಸ್ಥರು

ಚನ್ನಮ್ಮನ ಕಿತ್ತೂರು–ಹಿರೇನಂದಿಹಳ್ಳಿ: ಗ್ರಾಮದ ಶ್ರೀ ವಿಠ್ಠಲ–ರುಕ್ಮಿಣಿ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಶ್ರಾವಣ ಮಾಸದ ಅಂಗವಾಗಿ ಒಂದು ತಿಂಗಳ ಕಾಲ ಹಮ್ಮಿಕೊಂಡಿದ್ದ ಶ್ರೀ ಗರಗದ ಶ್ರೀ ಗುರು ಮಡಿವಾಳೇಶ್ವರ ಮಹಾತ್ಮೆ ಪುರಾಣ ಪಠಣ ಹಾಗೂ ಅನ್ನದಾಸೋಹ ಕಾರ್ಯಕ್ರಮ ಭಕ್ತಿ-ಭಾವದಿಂದ ಸಂಪನ್ನಗೊಂಡಿತು.

ಪುರಾಣ ಪಠಣವನ್ನು ಡಾ. ಶ್ರೀ ಗುರುಸಿದ್ದಪ್ಪ ಕಲ್ಮಠ ಅವರು ನೆರವೇರಿಸಿದರು. ಪುರಾಣದ ಜೊತೆಗೆ ದೇಶದ ಇತಿಹಾಸ, ಸಂಸ್ಕೃತಿ, ಬಸವಣ್ಣನವರ ವಚನಗಳು, ಪೂಜಾ ವಿಧಿ–ವಿಧಾನಗಳು ಹಾಗೂ ಬಸವತತ್ವದ ವಿವಿಧ ವಿಚಾರಗಳನ್ನು ಭಕ್ತರಿಗೆ ತಿಳಿಸುವ ಮೂಲಕ ಧಾರ್ಮಿಕ ಹಾಗೂ ಸಾಮಾಜಿಕ ಜಾಗೃತಿ ಮೂಡಿಸಿದರು.

ಒಂದು ತಿಂಗಳ ಕಾಲ ಪ್ರತಿದಿನ ಅನ್ನದಾಸೋಹ ನಡೆಯಿತು. ಗ್ರಾಮದ ಪ್ರತಿಯೊಂದು ಮನೆಯವರು ಸ್ವಯಂಪ್ರೇರಣೆಯಿಂದ ಭಕ್ತಿಪೂರ್ವಕವಾಗಿ ಅನ್ನಸೇವೆಯಲ್ಲಿ ಪಾಲ್ಗೊಂಡು, ದಿನಕ್ಕೊಂದು ಕುಟುಂಬದಂತೆ ಸೇವೆ ಸಲ್ಲಿಸಿದರು.

ಗ್ರಾಮದ ಹಲವು ಮಹಿಳೆಯರು ಪ್ರವಚನಕ್ಕೆ ಅಗತ್ಯವಿರುವ ಪೂಜಾ ವಿಧಿ–ವಿಧಾನಗಳು, ರಂಗೋಲಿ ಸೇರಿದಂತೆ ವಿವಿಧ ಸೇವಾ ಕಾರ್ಯಗಳಲ್ಲಿ ಪ್ರತಿದಿನ ತೊಡಗಿಸಿಕೊಂಡು ದೇವಸ್ಥಾನದ ಸೇವೆಗೆ ಕೈಜೋಡಿಸಿದರು. ಶ್ರೀ ನಾಗಭೂಷಣ ಶಿವಯೋಗಿಗಳವರ ಭಜನಾ ಮಂಡಳಿಯವರು ಕೂಡ ನಿರಂತರವಾಗಿ ಭಜನಾ ಸೇವೆ ಸಲ್ಲಿಸಿದರು.

ದೇವಸ್ಥಾನಕ್ಕೆ ಸಂಬಂಧಿಸಿದ ಕುಟುಂಬಗಳು ಹಾಗೂ ಗ್ರಾಮಸ್ಥರು ತನು–ಮನ–ಧನದಿಂದ ಸೇವೆ ಸಲ್ಲಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ದೇವಸ್ಥಾನ ಸಮಿತಿಯ ಸಿಬ್ಬಂದಿಯೂ ಕಾರ್ಯಕ್ರಮದ ಎಲ್ಲ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

ಕಾರ್ಯಕ್ರಮದ ಸಮಾರೋಪದಲ್ಲಿ ಅನ್ನದಾನಿಗಳು, ಭಜನಾ ತಂಡದ ಸದಸ್ಯರು, ಪುರಾಣ ಪಠಣ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಹೂಮಾಲೆ ಹಾಗೂ ಶಾಲು ಹೊದಿಸಿ ಗೌರವಿಸಲಾಯಿತು. ಶ್ರೀ ಉಳವನಗೌಡ ಪಾಟೀಲ ಹಾಗೂ ಶ್ರೀ ಮಡಿವಾಳೇಶ್ವರ ಮೂರ್ತಿ ಸೇವೆಗೂ ವಿಶೇಷ ಗೌರವ ಸಲ್ಲಿಸಲಾಯಿತು.

ಒಗ್ಗಟ್ಟಿನಿಂದ ನಡೆದ ಒಂದು ತಿಂಗಳ ಧಾರ್ಮಿಕ ಕಾರ್ಯಕ್ರಮಕ್ಕೆ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದ್ದು,

ಇಂತಹ ಭಕ್ತಿ, ಸೇವೆ ಹಾಗೂ ಸೌಹಾರ್ದತೆಯ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದು ಸಮಯವಾಣಿ & ಗಡಿನಾಡು ಸಮಾಚಾರ ನ್ಯೂಸ್ ಸಂಪಾದಕರು ಹಾಗೂ ಭಕ್ತರು ಪ್ರಾರ್ಥಿಸಿದರು.

Leave a Comment

error: Content is protected !!