ಮಲಪ್ರಭಾ ಸಕ್ಕರೆ ಕಾರ್ಖಾನೆ ರೈತರ ಆಸ್ತಿಯಾಗಿದ್ದು, ಅದನ್ನು ಸುಸ್ಥಿತಿಗೆ ತಂದು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಅಭಿವೃದ್ಧಿಪಡಿಸುವುದು ಆಡಳಿತ ಮಂಡಳಿಯ ಪ್ರಮುಖ ಗುರಿಯಾಗಿದೆ : ಚೆನ್ನರಾಜ್ ಹಟ್ಟಿಹೊಳಿ

ಬೆಳಗಾವಿ : ಎಮ್ ಕೆ ಹುಬ್ಬಳ್ಳಿ  ಮಲಪ್ರಭಾ ಸಕ್ಕರೆ ಕಾರ್ಖಾನೆಗೆ ಆಧುನಿಕ ಸ್ಪರ್ಶ ನೀಡಿ ಮತ್ತೆ ಅದರ ಗತವೈಭವವನ್ನು ಮರುಕಳಿಸುವಂತೆ ಮಾಡುವುದು ನಮ್ಮ ಆಡಳಿತ ಮಂಡಳಿಯ ಪ್ರಮುಖ ಗುರಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕಾರ್ಖಾನೆಯ ಅಧ್ಯಕ್ಷರಾದ ಚನ್ನರಾಜ ಹಟ್ಟಿಹೊಳಿ ಹೇಳಿದರು.

ಕಾರ್ಖಾನೆಯ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಭಾಗದ ರೈತರ ಜೀವನಾಡಿಯಾಗಿರುವ ಹಾಗೂ ದೇಶದಲ್ಲಿಯೇ ಮಾದರಿಯಾಗಿದ್ದ ಮಲಪ್ರಭಾ ಸಕ್ಕರೆ ಕಾರ್ಖಾನೆ ಹಲವು ದಶಕಗಳ ಕಾರ್ಯನಿರ್ವಹಣೆಯಿಂದಾಗಿ ದುಸ್ಥಿತಿಗೆ ತಲುಪಿದೆ. ಕಾರ್ಖಾನೆಗೆ ಹಂತ ಹಂತವಾಗಿ ಆಧುನಿಕ ಯಂತ್ರೋಪಕರಣಗಳನ್ನು ಅಳವಡಿಸುವ ಮೂಲಕ ರೈತರು, ಸಣ್ಣ ರೈತರು ಹಾಗೂ ಕಾರ್ಮಿಕರಿಗೆ ಅನುಕೂಲ ಕಲ್ಪಿಸಲು ಆಡಳಿತ ಮಂಡಳಿ ಶಕ್ತಿಮೀರಿ ಶ್ರಮಿಸುತ್ತಿದೆ ಎಂದರು.

ರೈತರು ಹೆಚ್ಚಿನ ಪ್ರಮಾಣದಲ್ಲಿ ಗುಣಮಟ್ಟದ ಕಬ್ಬನ್ನು ಕಾರ್ಖಾನೆಗೆ ಪೂರೈಸಿ ಅಭಿವೃದ್ಧಿಗೆ ಸಹಕರಿಸಬೇಕು. ಆಡಳಿತ ಮಂಡಳಿಯ ಮೇಲೆ ವಿಶ್ವಾಸವಿಟ್ಟು ಕಾರ್ಖಾನೆ ನಡೆಸಲು ಅವಕಾಶ ನೀಡಿರುವ ರೈತರ ವಿಶ್ವಾಸಕ್ಕೆ ಯಾವುದೇ ಧಕ್ಕೆ ತರುವುದಿಲ್ಲ. ಎಷ್ಟೇ ಕಷ್ಟ ಬಂದರೂ ಕಾರ್ಖಾನೆಯನ್ನು ಸುಸ್ಥಿತಿಗೆ ತರದೆ ಬಿಡುವುದಿಲ್ಲ ಎಂದು ಅವರು ಭರವಸೆ ನೀಡಿದರು.

ಗಾಳಿ ಮಾತಿಗೆ ಕಿವಿಗೊಡಬೇಡಿ

ಕಳೆದ ಹಂಗಾಮಿನಲ್ಲಿ ಯಾವುದೇ ಪೂರ್ವಸಿದ್ಧತೆ ಇಲ್ಲದಿದ್ದರೂ ಕೇವಲ ಒಂದು ತಿಂಗಳ ಅವಧಿಯಲ್ಲಿ 2,31,115 ಟನ್ ಕಬ್ಬನ್ನು ನುರಿಸಲಾಗಿದ್ದು, ಪ್ರತಿ ಟನ್ ಕಬ್ಬಿಗೆ ₹3,300ರಂತೆ ಬಿಲ್ ಪಾವತಿಸಲಾಗಿದೆ. ಸರ್ಕಾರದ ಹೆಚ್ಚುವರಿ ₹50 ಮೊತ್ತವನ್ನೂ ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗಿದೆ. ರೈತರಿಗೆ ಸಕ್ಕರೆಯನ್ನೂ ನೀಡಲಾಗಿದೆ ಎಂದು ಚನ್ನರಾಜ ಹಟ್ಟಿಹೊಳಿ ವಿವರಿಸಿದರು.

ಪ್ರಸಕ್ತ ಹಂಗಾಮು ಆರಂಭಿಸಲು ಅಗತ್ಯವಿರುವ ಸುಮಾರು 2,000 ಟನ್ ಬಗಾಸ್ ಶೇಖರಣೆ ಮಾಡಲಾಗಿದೆ. ಕಾರ್ಮಿಕರ ಆರು ತಿಂಗಳ ಬಾಕಿ ಹಣ ಸೇರಿದಂತೆ ಪ್ರತಿ ತಿಂಗಳ ವೇತನವನ್ನು ವ್ಯವಸ್ಥಿತವಾಗಿ ಪಾವತಿಸಲಾಗುತ್ತಿದೆ. ಶೇ.11.50ರಷ್ಟು ರಿಕವರಿ ಸಾಧಿಸುವ ಉದ್ದೇಶದಿಂದ ಆಧುನಿಕ ಯಂತ್ರೋಪಕರಣಗಳನ್ನು ಅಳವಡಿಸಲಾಗುತ್ತಿದೆ ಎಂದರು.

ಅವ್ಯವಹಾರಗಳ ತನಿಖೆಗೆ ಸಂಪೂರ್ಣ ಸಹಕಾರ
ಮಲಪ್ರಭಾ ಸಕ್ಕರೆ ಕಾರ್ಖಾನೆ ರೈತರ ಆಸ್ತಿಯಾಗಿದ್ದು, ಅದನ್ನು ಉಳಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದೇನೆ. ಹಿಂದಿನ ಅವ್ಯವಹಾರಗಳ ಕುರಿತು ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದ್ದು, ತನಿಖಾ ತಂಡಕ್ಕೆ ಅಗತ್ಯ ಸಹಕಾರ ನೀಡಲಾಗುತ್ತಿದೆ. ನಮ್ಮ ಅವಧಿಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಸುಮಾರು ₹17 ಕೋಟಿ ಅವ್ಯವಹಾರವನ್ನು ಬೆಳಕಿಗೆ ತರುವಲ್ಲಿ ಸಹಕರಿಸಲಾಗಿದೆ. ತಪ್ಪು ಮಾಡಿದವರು ಕಾನೂನು ಪ್ರಕಾರ ಶಿಕ್ಷೆ ಅನುಭವಿಸಲೇಬೇಕು ಎಂದು ಅವರು ಹೇಳಿದರು.

ರೈತರು ಹಾಗೂ ರೈತ ಸಂಘಟನೆಗಳ ಬೆಂಬಲಕ್ಕೆ ಆಡಳಿತ ಮಂಡಳಿ ಬದ್ಧವಾಗಿದೆ ಎಂದ ಅವರು, ಬೀರೇಶ್ವರ ಬ್ಯಾಂಕ್ ಕಾರ್ಖಾನೆಯ ನೆರವಿಗೆ ನಿಂತಿದ್ದು, ₹50 ಕೋಟಿ ಸಾಲವನ್ನು ಬಡ್ಡಿ ಕಡಿತಗೊಳಿಸಿ ₹40 ಕೋಟಿಗೆ ನವೀಕರಿಸಲಾಗಿದೆ. ನೂತನ ಯಂತ್ರೋಪಕರಣಗಳ ಖರೀದಿಗೂ ಬ್ಯಾಂಕ್ ಸಹಕಾರ ನೀಡುತ್ತಿದೆ ಎಂದು ತಿಳಿಸಿದರು.

ನಾಲ್ಕು ಲಕ್ಷ ಟನ್ ಕಬ್ಬು ನುರಿಸುವ ಗುರಿ

ಪ್ರಸಕ್ತ ಸಾಲಿನಲ್ಲಿ 4 ಲಕ್ಷ ಟನ್ ಕಬ್ಬು ನುರಿಸುವ ಗುರಿ ಹೊಂದಿದ್ದು, ಅದಕ್ಕೆ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪ್ರಸ್ತುತ ದಿನಕ್ಕೆ 3,500 ಟನ್ ಕಬ್ಬು ನುರಿಸುವ ಸಾಮರ್ಥ್ಯವಿದ್ದು, ಅದನ್ನು 2028ರ ವೇಳೆಗೆ 6,000 ಟನ್‌ಗೆ ಹೆಚ್ಚಿಸುವ ಯೋಜನೆ ರೂಪಿಸಲಾಗಿದೆ ಎಂದು ಅಧ್ಯಕ್ಷರು ಹೇಳಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾರ್ಖಾನೆಯ ನೆರವಿಗೆ ಬಂದಿಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಅಪೆಕ್ಸ್ ಬ್ಯಾಂಕ್ ಚುನಾವಣೆ ನಡೆಯುತ್ತಿದ್ದು, ಚುನಾವಣೆ ಮುಗಿದ ಬಳಿಕ ಸಹಕಾರಿ ಕ್ಷೇತ್ರದ ಎಲ್ಲ ಸಂಘಗಳಿಗೆ ನೆರವು ನೀಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಸಹಕಾರಿ ಸಚಿವರಾದ ಲಕ್ಷ್ಮಣ ಸವದಿ ಅವರಿಂದಲೂ ಸಹಾಯದ ನಿರೀಕ್ಷೆಯಿದೆ ಎಂದರು.

ಸಾಲ ಮಂಜೂರಿಗೆ ಅಡ್ಡಗಾಲು ಆರೋಪ
ಕಾರ್ಖಾನೆಯ ಅಭಿವೃದ್ಧಿಗಾಗಿ ಆಡಳಿತ ಮಂಡಳಿ ಶ್ರಮಿಸುತ್ತಿರುವ ಸಂದರ್ಭದಲ್ಲಿ ಕೆಲವರು ತಮ್ಮ ರಾಜಕೀಯ ಭವಿಷ್ಯಕ್ಕಾಗಿ ರೈತರ ಕಾರ್ಖಾನೆಯ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದ ಚನ್ನರಾಜ ಹಟ್ಟಿಹೊಳಿ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಅರವಿಂದ ಪಾಟೀಲ ಹಾಗೂ ಮಹಾಂತೇಶ ದೊಡ್ಡಗೌಡ್ರು ಅವರು ಡಿಸಿಸಿ ಬ್ಯಾಂಕ್‌ನಿಂದ ಮಂಜೂರಾಗಿದ್ದ ಸಾಲಕ್ಕೆ ಅಡ್ಡಗಾಲು ಹಾಕಿ ಸಾಲ ಮಂಜೂರಾಗದಂತೆ ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದರು. ಈ ಮೂಲಕ ಸುದ್ದಿಗೋಷ್ಠಿಯಲ್ಲಿ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗುವಂತಹ ಆರೋಪಗಳನ್ನು ಮಾಡಿದರು.

ಸದಸ್ಯರು ಬೇರೆ ಕಾರ್ಖಾನೆಗೆ ಕಬ್ಬು ಕಳುಹಿಸಬೇಡಿ
ಈ ಸಂದರ್ಭದಲ್ಲಿ ನಿರ್ದೇಶಕ ಶಂಕರ್ ಹೊಳಿ ಮಾತನಾಡಿ, ಈ ಬಾರಿ ರೈತರಿಗೆ ಗ್ಯಾಂಗ್‌ಗಳನ್ನು ಪೂರೈಸಲಾಗುವುದು. ಕಾರ್ಖಾನೆಯ ಯಾವುದೇ ಸದಸ್ಯರು ಬೇರೆ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಕಳುಹಿಸಬಾರದು. ಹೆಚ್ಚಿನ ಮಾಹಿತಿಗಾಗಿ ಕಾರ್ಖಾನೆಯನ್ನು ಸಂಪರ್ಕಿಸಬೇಕು. ಎಲ್ಲ ನಿರ್ದೇಶಕರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ತರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರೈತರ ಸಹಕಾರ ಅತ್ಯಗತ್ಯವಾಗಿದೆ ಎಂದರು.

ಚನ್ನರಾಜ ಹಟ್ಟಿಹೊಳಿ ಅವರು ತಮ್ಮ ವೈಯಕ್ತಿಕ ಆಸ್ತಿಗಳ ಮೇಲೆ ಸಾಲ ಮಾಡಿ ಕಾರ್ಖಾನೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅವರಿಗೆ ರೈತರು ಬೆನ್ನೆಲುಬಾಗಿ ನಿಲ್ಲಬೇಕು ಎಂದು ಅವರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರಾದ ಸುರೇಶ ಹುಲಿಕಟ್ಟಿ, ಶಿವಪುತ್ರಪ್ಪ ಮರಡಿ, ಬಾಳಪ್ಪ ಪೂಜಾರಿ, ರಾಮನಗೌಡ ಪಾಟೀಲ, ರಘು ಪಾಟೀಲ, ಭರ್ಮಪ್ಪ ಸೀಗೆಹಳ್ಳಿ, ಸುನಿತಾ ಲಂಗುಟಿ, ಲಲಿತಾ ಪಾಟೀಲ, ಕಚೇರಿ ಅಧೀಕ್ಷಕರಾದ ಎಸ್.ಜಿ. ಹೆಗಡೆ ಸೇರಿದಂತೆ ಕಾರ್ಖಾನೆಯ ಆಡಳಿತ ಮಂಡಳಿಯ ನಿರ್ದೇಶಕರು ಉಪಸ್ಥಿತರಿದ್ದರು.

Leave a Comment

error: Content is protected !!