ಖಾನಾಪುರ ತಾಲೂಕಿನ ಕಸಮಳಗಿ ದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಸಂಭ್ರಮ ಒಂಬತ್ತು ದಿನಗಳ ದುರ್ಗಾ ಪುರಾಣ ಪ್ರವಚನ, ಪ್ರತಿದಿನ ಮಹಾಪ್ರಸಾದ ವಿತರಣೆ – ಭಕ್ತರ ಮೆಚ್ಚುಗೆ

ಖಾನಾಪುರ: ತಾಲೂಕಿನ ಸುಕ್ಷೇತ್ರ ಕಸಮಳಗಿ ಗ್ರಾಮದ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಮಹಾನವಮಿ ಹಾಗೂ ನವರಾತ್ರಿ ಅಂಗವಾಗಿ ಒಂಬತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರದ್ಧಾ ಭಕ್ತಿಯಿಂದ ಆಯೋಜಿಸಲಾಗಿತ್ತು.
ಕಳೆದ ಒಂಬತ್ತು ದಿನಗಳಿಂದ ದೇವಸ್ಥಾನದಲ್ಲಿ ದುರ್ಗಾ ಪುರಾಣ ಪ್ರವಚನದ ಜೊತೆಗೆ ಪ್ರತಿದಿನ ಮಹಾಪ್ರಸಾದ ವಿತರಣೆ ಮಾಡಲಾಯಿತು. ವಿಶೇಷವೆಂದರೆ, ಪ್ರತಿದಿನ ಹೋಳಿಗೆ, ಹುಗ್ಗಿ ಸೇರಿದಂತೆ ವಿವಿಧ ಬಗೆಯ ಖಾದ್ಯಗಳನ್ನು ಭಕ್ತರಿಗೆ ವಿತರಿಸುವ ಮೂಲಕ ಮಹಾಪ್ರಸಾದವನ್ನು ವಿಶೇಷವಾಗಿ ಆಯೋಜಿಸಲಾಗಿತ್ತು.
ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಅಪಾರ ಸಂಖ್ಯೆಯ ಭಕ್ತರು ಮಹಾಪ್ರಸಾದ ಸ್ವೀಕರಿಸಿ, ದೇವಸ್ಥಾನ ಕಮಿಟಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಳೆದ ನಾಲ್ಕು ವರ್ಷಗಳಿಂದ ದೇವಸ್ಥಾನ ಕಮಿಟಿಯ ಸದಸ್ಯರು ಹಾಗೂ ಗ್ರಾಮದ ದೇವಿಯ ಭಕ್ತರೆಲ್ಲರೂ ಒಗ್ಗಟ್ಟಿನಿಂದ ಈ ಧಾರ್ಮಿಕ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದು, ವರ್ಷದಿಂದ ವರ್ಷಕ್ಕೆ ಭಕ್ತರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
ಧಾರ್ಮಿಕ ಕಾರ್ಯಕ್ರಮಗಳಿಂದ ಗ್ರಾಮದಲ್ಲಿ ಶಾಂತಿ, ಸಮೃದ್ಧಿ: ಭೀಮಪ್ಪ ಬೋಕಡೆಕರ್
ಈ ಕುರಿತು ದೇವಸ್ಥಾನ ಕಮಿಟಿಯ ಅಧ್ಯಕ್ಷ ಭೀಮಪ್ಪ ಬೋಕಡೆಕರ್ ಅವರು ಸಮಯವಾಣಿ ನ್ಯೂಸ್ ವಾಹಿನಿಯೊಂದಿಗೆ ಮಾತನಾಡಿ, “ಸುಕ್ಷೇತ್ರ ಕಸಮಳಗಿ ಶ್ರದ್ಧಾ ಭಕ್ತಿಯ ಪ್ರಮುಖ ಕೇಂದ್ರವಾಗಿದೆ. ಗ್ರಾಮದ ಪ್ರತಿಯೊಂದು ದೇವಾಲಯದಲ್ಲಿಯೂ ವರ್ಷವಿಡೀ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತವೆ. ಗ್ರಾಮದ ಭಕ್ತರು ತನು, ಮನ, ಧನದಿಂದ ಭಾಗವಹಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುತ್ತಿದ್ದಾರೆ.
ಧಾರ್ಮಿಕ ಕಾರ್ಯಕ್ರಮಗಳಿಂದ ಜನರಲ್ಲಿ ಭಕ್ತಿ, ಪರಸ್ಪರ ಸಾಮರಸ್ಯ ಹಾಗೂ ನೆಮ್ಮದಿಯ ಭಾವನೆ ಹೆಚ್ಚುತ್ತಿದೆ. ಗ್ರಾಮದ ಜನರ ಜೀವನದಲ್ಲಿ ಶಾಂತಿ ಮತ್ತು ಸಮೃದ್ಧಿ ನೆಲೆಸಲು ದುರ್ಗಾ ಮಾತೆಯ ಅನುಗ್ರಹ ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಗ್ರಾಮದ ಎಲ್ಲ ಭಕ್ತರು ಒಗ್ಗಟ್ಟಿನಿಂದ ಚಿಂತನೆ ನಡೆಸಿ ಧಾರ್ಮಿಕ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುತ್ತಿದ್ದಾರೆ. ತಾಯಿ ದುರ್ಗಾದೇವಿಯು ಎಲ್ಲ ಭಕ್ತರಿಗೂ ಸಕಲ ಸೌಭಾಗ್ಯಗಳನ್ನು ಕರುಣಿಸಿ ಆಶೀರ್ವದಿಸಲಿ” ಎಂದು ಹಾರೈಸಿದರು.
ಗಣ್ಯರ ಉಪಸ್ಥಿತಿ
ದುರ್ಗಾ ಪುರಾಣ ಪ್ರವಚನ ಕಾರ್ಯಕ್ರಮವನ್ನು ಗುಂಡೇನಟ್ಟಿಯ ಪೂಜ್ಯ ಶ್ರೀಕಾಂತಯ್ಯ ಹಿರೇಮಠದವರು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಅರವಿಂದ ಪಾಟೀಲ, ಅವರಳ್ಳಿ ಬಿಳಕಿ ರುದ್ರಸ್ವಾಮಿ ಮಠದ ಪೂಜ್ಯ ಚನ್ನಬಸವ ದೇವರು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ದೇವಸ್ಥಾನ ಕಮಿಟಿಯ ಸರ್ವ ಸದಸ್ಯರು, ಗ್ರಾಮದ ಯುವಕರು, ತಾಯಂದಿರು ಹಾಗೂ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದು, ನವರಾತ್ರಿ ಧಾರ್ಮಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾದರು.
ವರದಿ: ಎಂ ರಾಜಾಬಯಿ, ಸಮಯವಾಣಿ ನ್ಯೂಸ್ | ಚನ್ನಮ್ಮನ ಕಿತ್ತೂರು

